ಭಾರತೀಯರಿಗಿಲ್ಲ ಸೋಂಕು: ಕರೊನಾಪೀಡಿತ ವುಹಾನ್​ನಿಂದ ರಕ್ಷಿಸಲ್ಪಟ್ಟಿರುವವರು ಸುರಕ್ಷಿತ

Corona
Published on

ನವದೆಹಲಿ: ಕೆಲ ದಿನಗಳ ಹಿಂದೆ ಚೀನಾದ ವುಹಾನ್ ಪ್ರದೇಶದಿಂದ ರಕ್ಷಿಸಿ ಕರೆತರಲಾಗಿರುವ 112 ಭಾರತೀಯರಲ್ಲಿ ಕರೊನಾ ಸೋಂಕು ಇಲ್ಲ ಎಂಬುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ವಿಶೇಷ ಚಿಕಿತ್ಸಾ ಘಟಕದಲ್ಲಿ ಇವರನ್ನು ಇರಿಸಲಾಗಿದೆ.

ವುಹಾನ್​ನಿಂದ ಭಾರತಕ್ಕೆ ಕರೆತರಲಾದ 112 ವ್ಯಕ್ತಿಗಳ ಸ್ಯಾಂಪಲ್​ಗಳನ್ನು ಏಮ್ಸ್​ಗೆ ಕಳಿಸಲಾಗಿತ್ತು. ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ. ಇನ್ನು 15 ದಿನಗಳ ಬಳಿಕ ಮತ್ತೆ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅಲ್ಲಿಯವರೆಗೂ ಅವರು ಚಿಕಿತ್ಸಾ ಘಟಕದಲ್ಲೇ ಇರಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾರತೀಯರು ಹಾಗೂ 36 ವಿದೇಶಿಯರನ್ನು ಫೆ. 27ರಂದು ವಿಶೇಷ ವಿಮಾನದಲ್ಲಿ ದೆಹಲಿಗೆ ಕರೆತರಲಾಗಿತ್ತು. ವಿದೇಶಿಗರಲ್ಲಿ ಬಾಂಗ್ಲಾದೇಶ, ಮ್ಯಾನ್ಮಾರ್, ಮಾಲ್ಡೀವ್ಸ್, ದಕ್ಷಿಣ ಆಫ್ರಿಕಾ, ಅಮೆರಿಕ ಪ್ರಜೆಗಳು ಸೇರಿದ್ದಾರೆ.

ಇನ್ನು 15 ದಿನಗಳ ಬಳಿಕ ಮತ್ತೊಂದು ಪರೀಕ್ಷೆ ನಡೆಯಲಿದ್ದು, ಇದರಲ್ಲಿ ಸೋಂಕು ಇಲ್ಲ ಎಂದು ದೃಢಪಟ್ಟರೆ ಅಂಥವರನ್ನು ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ ಚೀನಾದಲ್ಲಿರುವ ಸುಮಾರು 650 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದ್ದು, ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ. ಈಗಾಗಲೇ ಹಲವರನ್ನು ಮನೆಗೆ ಕಳಿಸಲಾಗಿದೆ.

ಯಾವ ದೇಶದಲ್ಲಿ ಎಷ್ಟು ಕರೊನಾ?

ಚೀನಾ-78,824, ಅಮೆರಿಕ-60, ಕೆನಡಾ-14, ಜರ್ಮನಿ-48, ಬ್ರಿಟನ್-19, ಫ್ರಾನ್ಸ್-38, ಸ್ಪೇನ್-25, ಇಟಲಿ-655, ಕುವೇಟ್-43, ಬಹರೇನ್-33, ಯುಎಇ-19, ಥಾಯ್ಲೆಂಡ್-41, ವಿಯೆಟ್ನಾಂ-16, ಮಲೇಷ್ಯಾ-23, ಸಿಂಗಾಪುರ-93, ಜಪಾನ್-228, ದಕ್ಷಿಣ ಕೊರಿಯಾ-2337, ತೈವಾನ್-34, ಹಾಂಕಾಂಗ್-94, ಮಕಾವು-10, ಆಸ್ಟ್ರೇಲಿಯಾ-23. ಬಲ್ಗೇರಿಯಾ-2, ಉಕ್ರೇನ್-5, ಈಕ್ವೆಟೋರಿಯಲ್ ಗಿನಿಯಾ-6, ಸುಡಾನ್-2, ಕೊಲಂಬಿಯಾ-50, ಇಂಡೋನೇಷ್ಯಾ-50. ಈಕ್ವೆಡಾರ್, ಬೋತ್ಸವಾನಾ, ಜೆಕ್ ಗಣರಾಜ್ಯ, ನಮೀಬಿಯಾ, ಪೆರು, ಮಾಲ್ದೀವ್ಸ್, ಮ್ಯಾನ್ಮಾರ್, ಅಂಗೋಲಾ, ಐವರಿ ಕೋಸ್ಟ್, ಇಥಿಯೋಪಿಯಾ, ಕೆನ್ಯಾ, ಮೆಕ್ಸಿಕೊ, ಸೈಪ್ರಸ್, ಐರ್ಲೆಂಡ್, ಪೋಲೆಂಡ್​ಗಳಲ್ಲೂ ಕೆಲ ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಶಂಕಿತ ಕರೊನಾ ಸೋಂಕಿತ ಸಾವು

ಕೊಚ್ಚಿ/ಎರ್ನಾಕುಳಂ: ಕರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ ಶಂಕೆಯ ಮೇಲೆ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದ್ದ 36 ವರ್ಷದ ವ್ಯಕ್ತಿಯೊಬ್ಬ ಶುಕ್ರವಾರ ರಾತ್ರಿ ಕೇರಳದ ಎರ್ನಾಕುಳಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಆತನ ಮೊದಲ ಮಾದರಿ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಿತ್ತು ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ. ಈಗ ಮತ್ತೆ ದೇಹದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು ಫಲಿತಾಂಶ ನಿರೀಕ್ಷಿಸಲಾಗುತ್ತಿದೆ. ಕಣ್ಣೂರು ಜಿಲ್ಲೆಯ ಪಯ್ಯನೂರು ನಿವಾಸಿಯಾದ ಯುವಕ ಗುರುವಾರ ರಾತ್ರಿ ಮಲೇಷ್ಯಾದಿಂದ ನೆಡುಂಬಚೇರಿಗೆ ಆಗಮಿಸಿದ್ದ. ತೀವ್ರ ನ್ಯೂಮೋನಿಯಾ ಹಾಗೂ ಅತಿ ರಕ್ತದೊತ್ತಡದಿಂದ ಬಳಲುತ್ತಿದ್ದ. ಕರೊನಾ ಸೋಂಕಿನಿಂದಲೇ ಯುವಕ ಮೃತಪಟ್ಟಿದ್ದಾನೆಯೇ ಎನ್ನುವುದು ಇನ್ನೂ ದೃಢಪಟ್ಟಿಲ್ಲ ಎಂದು ಕೇರಳದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಹೇಳಿದ್ದಾರೆ.

ದೇಸಿ ರೇಷ್ಮೆ ಬೆಲೆ ಹೆಚ್ಚಿಸಿದ ‘ಕರೊನಾ’

ಚಾಮರಾಜನಗರ: ಕರೊನಾ ವೈರಸ್​ನಿಂದ ಭಾರತ ಮತ್ತು ಚೀನಾ ನಡುವಿನ ಆಮದು, ರಫ್ತು ಸ್ಥಗಿತಗೊಂಡಿರುವ ಪರಿಣಾಮ ಚೀನಾ ರೇಷ್ಮೆ ಆಮದಿಗೂ ಪೆಟ್ಟು ಬಿದ್ದಿದ್ದು, ಜಿಲ್ಲೆಯಲ್ಲಿ ಪ್ರತಿ ಕೆ.ಜಿ. ದೇಸಿ ರೇಷ್ಮೆಗೂಡು 500 ರೂ.ಗಳಿಗೂ ಅಧಿಕ ದರದಲ್ಲಿ ಮಾರಾಟವಾಗುತ್ತಿದೆ. ಸಂತೇಮರಹಳ್ಳಿ, ಕೊಳ್ಳೇಗಾಲದಲ್ಲಿ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಗಳಲ್ಲಿ ಜ.10ರಂದು ಪ್ರತಿ ಕೆಜಿಗೆ ಗರಿಷ್ಠ 500 ರೂ., ಕನಿಷ್ಠ 400 ರೂ., ಸರಾಸರಿ 444 ರೂ. ಇತ್ತು. ಚೀನಾದಲ್ಲಿ ಕರೊನಾ ಬಾಧಿಸಲಾರಂಭಿಸಿದ ತಿಂಗಳ ಅವಧಿಯಲ್ಲಿ ರೇಷ್ಮೆಆಮದಿನಲ್ಲಿ ವ್ಯತ್ಯಾಸವಾಗಿ ಪ್ರತಿ ಕೆಜಿಗೆ ಸರಾಸರಿ 50ರಿಂದ 60 ರೂ. ಬೆಲೆ ಏರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net