ಈ ಮೂರು ಜಿಲ್ಲೆಗಳ ಜನರಿಗೆ ಕರೊನಾ ಹತ್ತಿರವೂ ಸುಳಿಯುತ್ತಿಲ್ಲ... ಯಾಕೆ?

no corona
Published on

ರಾಯಪುರ: ಛತ್ತೀಸ್‍ಗಢದ ಬಸ್ತಾರ್ ಪ್ರದೇಶವು ಬುಡಕಟ್ಟು ಜನರೇ ಹೆಚ್ಚಾಗಿರುವ ಸ್ಥಳ. ಇಡೀ ರಾಜ್ಯದ 28 ಜಿಲ್ಲೆಗಳಲ್ಲಿ ಹತ್ತಿರಹತ್ತಿರ ಎರಡು ಸಾವಿರ ಜನರಿಗೆ ಕರೊನಾ ಸೋಂಕು ತಗುಲಿದ್ದರೂ ಈ ಬುಡಕಟ್ಟು ಜನರಿರುವ ಮೂರು ಜಿಲ್ಲೆಗಳಲ್ಲಿ ಒಬ್ಬರಿಗೂ ಕರೊನಾ ಬಂದಿಲ್ಲ. ಇದು ಹೊರಜಗತ್ತಿಗೆ ಅಚ್ಚರಿಯ ವಿಷಯವಾಗಿ ಪರಿಣಮಿಸಿದೆ.

ಆ ಬುಡಕಟ್ಟಿನ ಜನರಲ್ಲಿ ಈ ರೀತಿಯ ಇಮ್ಯೂನಿಟಿ (ರೋಗನಿರೋಧಕತೆ) ಬೆಳೆಯಲು ಕಾರಣ ಅವರ ಆಹಾರ ಮತ್ತು ಜೀವನ ಪದ್ಧತಿ. ಕಾಡಿನಲ್ಲಿ ಬೆಳೆಯುವ ಅಣಬೆಗಳು, ನಾನಾ ಜಾತಿಯ ಸೊಪ್ಪುಗಳು, ಗಿಡದ ಬೇರುಗಳು ಇವೆಲ್ಲವೂ ಅವರ ಆಹಾರ ಪದ್ಧತಿಯಲ್ಲಿ ಮಿಳಿತಗೊಂಡಿವೆ. ಇವುಗಳಿಂದಾಗಿ ಅವರಲ್ಲಿ ನೈಸರ್ಗಿಕ ಇಮ್ಯೂನಿಟಿ ಬೆಳೆದಿದೆ ಎನ್ನುತ್ತಾರೆ ಸ್ಥಳೀಯ ತಜ್ಞರು. ಈ ವಾದವನ್ನು ಪುಷ್ಟೀಕರಿಸಲು ಅಗತ್ಯವಾದ ಅಧ್ಯಯನ ನಡೆಯುವ ಅವಶ್ಯಕತೆ ಇದೆ ಎಂದೂ ಅವರು ಅಭಿಪ್ರಾಯಪಡುತ್ತಾರೆ.

ಕಾಡಿನಲ್ಲಿ ಸಿಗುವ ಹಣ್ಣು, ತರಕಾರಿಗಳನ್ನು ಮನೆಗೆ ತರುವ ಈ ಬುಡಕಟ್ಟು ಜನರು ಅವುಗಳನ್ನು ಬೇಯಿಸುವುದು, ಕುದಿಸುವುದು ಅಪರೂಪ. ಹಸಿಹಸಿಯಾಗಿ ತಿನ್ನುವುದೇ ಹೆಚ್ಚು. ಚಾಕುವಿನಿಂದ ಕತ್ತರಿಸುವ ಪದ್ಧತಿಯೂ ಇಲ್ಲಿಲ್ಲ. ಅದರ ಬದಲು ಕಲ್ಲಿನಿಂದ ಜಜ್ಜಿ ತುಂಡು ಮಾಡುತ್ತಾರೆ. ಈ ರೀತಿ ಇವರು ಸೇವಿಸುವ 88 ಪದಾರ್ಥಗಳನ್ನು ತಜ್ಞರು ಪಟ್ಟಿ ಮಾಡಿದ್ದಾರೆ. ಇವುಗಳ ಪೈಕಿ 50ಕ್ಕೂ ಹೆಚ್ಚು ಪದಾರ್ಥಗಳು ಹಣ್ಣು- ಹಸಿರು ತರಕಾರಿಗಳೇ ಆಗಿವೆ.

ಬುಡಕಟ್ಟು ಜನರು ಹೆಚ್ಚಾಗಿ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತಾರೆ ಎನ್ನುವುದು ಬಸ್ತಾರ್ ವಿಷಯದಲ್ಲಿ ನಿಜವಲ್ಲ. ನಿಯಮಿತವಾಗಿ ಮಾಂಸಾಹಾರ ಸೇವಿಸುವ ಕುಟುಂಬಗಳು ಇಲ್ಲಿ ಅತ್ಯಂತ ವಿರಳ. ಶೇಕಡಾ 90ರಷ್ಟು ಜನರು ಸಸ್ಯಾಹಾರಕ್ಕೇ ಒಗ್ಗಿಹೋಗಿದ್ದಾರೆ. ಇದು ಕೂಡ ಅವರಲ್ಲಿನ ಇಮ್ಯುನಿಟಿ ಹೆಚ್ಚಲು ಕಾರಣವಿರಬಹುದು ಎನ್ನುತ್ತಾರೆ ಪರಿಣಿತರು.

ಬಸ್ತಾರ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆ್ಯಂಥ್ರಪಾಲಜಿಯ ಅಸೋಸಿಯೇಟ್ ಪ್ರೊಫೆಸರ್ ಡಾ. ಸ್ವಪನ್ ಕುಮಾರ್, ``ಬುಡಕಟ್ಟು ಜನರಲ್ಲಿ ಇಮ್ಯುನಿಟಿ ಹೆಚ್ಚಿರುವುದಕ್ಕೆ `ಜಂಗ್ಲಿ ಫುಡ್' ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರ ಆಹಾರ ಪದ್ಧತಿಯನ್ನು ನಗರ ಪ್ರದೇಶದ ಜನರೂ ಅನುಕರಿಸುವುದು ಸುಲಭವಲ್ಲ. ಇದಕ್ಕೆ ಭೌಗೋಳಿಕ, ಸಾಮಾಜಿಕ ಕಾರಣಗಳಿವೆ'' ಎನ್ನುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net