ಸಿಎಂ ಬದಲಾವಣೆ ಇಲ್ಲ, ಊಹಾಪೋಹಕ್ಕೆ ಅವಕಾಶವಿಲ್ಲ; ಡಾ.ಪರಮೇಶ್ವರ

ggp1
Published on

ಬೆಂಗಳೂರು: ಮುಖ್ಯಮಂತ್ರಿ ರಾಜೀನಾಮೆ ಕೊಡುವ ಅಗತ್ಯವೇ ಇಲ್ಲ. ಹಾಗಾಗಿ ‘ಅಕಸ್ಮಾತ್ ಬದಲಾವಣೆ’ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ನಾವು ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವಾಗ ‘ಅಕಸ್ಮಾತ್’ ಪ್ರಶ್ನೆ ಬರುವುದಿಲ್ಲ. ಹೀಗಾಗಿ ಸಿಎಂ ಬದಲಾವಣೆ, ಮುಂದಿನ ಸಿಎಂ ಚರ್ಚೆಯೇ ಇಲ್ಲ. ಊಹಾಪೋಹಕ್ಕೂ ಅವಕಾಶವಿಲ್ಲ ಎಂದು ಅವರು ತಿಳಿಸಿದರು. ಎಂದು ಸ್ಪಷ್ಟಪಡಿಸಿದರು.

ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ಪ್ರ್ರಾಸಿಕ್ಯೂಷನ್ ವಿಚಾರಣೆ ನಡೆಯುತ್ತಿರುವುದರಿಂದ ಅದರ ಬಗ್ಗೆ ರಾಜ್ಯಪಾಲರ ಬಳಿ ಚರ್ಚೆ ಮಾಡುವುದಿಲ್ಲ. ಎಚ್.ಡಿ.ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ, ಜನಾರ್ದನರೆಡ್ಡಿ ಹಗರಣದಲ್ಲಿ ಪ್ರಾಸಿಕ್ಯೂಷನ್ ನೀಡಬೇಕು ಎಂದು ನಮ್ಮ ಬೇಡಿಕೆ ಎಂದರು.

ಕೋವಿಡ್ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ತನಿಖಾ ಆಯೋಗದ ಅವಧಿಯನ್ನು ಆರು ತಿಂಗಳು ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದರು.

ಆಯೋಗದ ಕೋರಿಕೆ ಮೇರೆಗೆ ಇನ್ನು ಆರು ತಿಂಗಳು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿನ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡಲು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹ ಅವರ ನೇತೃತ್ವದ ತನಿಖಾ ಆಯೋಗ ರಚಿಸಲಾಗಿತ್ತು. ಆಯೋಗವು ಪೂರ್ಣ ಪ್ರಮಾಣದ ವರದಿ ನೀಡಲು ಇನ್ನು ಸಮಯ ಅವಕಾಶವಿದೆ ಎಂದು ಹೇಳಿದರು.

ಬಳ್ಳಾರಿ ಜೈಲಿನಲ್ಲಿರುವ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಅವರನ್ನು ಮೊದಲ ಅಥವಾ 2ನೇ ಆರೋಪಿ ಮಾಡಬೇಕೆಂಬುದನ್ನು ತನಿಖಾ ಅಧಿಕಾರಿಗಳು ನಿರ್ಧರಿಸುತ್ತಾರೆ. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಫೋನ್ ಕಾಲ್, ವಿಡಿಯೋ ಕಾಲ್ ಮಾಡಿರುವ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಸಿಸಿಬಿ ಮುಖ್ಯಸ್ಥ ಚಂದ್ರಗುಪ್ತ ಅವರನ್ನು ನೇಮಕ ಮಾಡಲಾಗಿದೆ. ತನಿಖೆ ನಡೆಸಿ ಅವರು ವರದಿ ನೀಡಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಡಾ.ಜಿ.ಪರಮೇಶ್ವರ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net