

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಲಿ, ಸಚಿವ ಸಂಪುಟ ಪುನರ್ ರಚನೆಯಾಗಲಿ ಸದ್ಯಕ್ಕಿಲ್ಲ(no change in the KPCC president for now) ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು(N S Bosaraju) ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಷಯ ಅಜೆಂಡಾದಲ್ಲೇ ಇಲ್ಲ. ನಾನು 51 ವರ್ಷಗಳಿಂದ ಪಕ್ಷದಲ್ಲಿದ್ದೇನೆ. ನನಗೆ ಇರುವ ಮಾಹಿತಿ ಪ್ರಕಾರ ಅಂತಹ ಯಾವ ಬದಲಾವಣೆಯೂ ಇಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಯಾರು ಮಾಡುತ್ತಾರೋ ಗೊತ್ತಿಲ್ಲ. ಎಲ್ಲ ಉಹಾಪೋಹ. ಸಮಯ ಬಂದಾಗ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ಜೊತೆ ಸಿಎಂ ರಾಜ್ಯದ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದರು.
ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಬಿಲ್ ಅಂಗೀಕಾರ ಆಗಿರುವುದು ಇತಿಹಾಸದಲ್ಲೇ ಒಂದು ಕೆಟ್ಟದಿನ. ಬಿಜೆಪಿ, ಆರ್‌ಎಸ್‌ಎಸ್‌ನವರ ಪ್ರಯತ್ನದಿಂದ ವಕ್ಫ್ ಮಸೂದೆ ಜಾರಿಗೆ ತಂದಿದ್ದಾರೆ. ದೇಶದಲ್ಲಿ ಎಲ್ಲ ವಿರೋಧ ಪಕ್ಷಗಳು ವಿರೋಧ ಮಾಡುತ್ತಿವೆ .ಜೆಡಿಯು ವಿರೋಧ ಮಾಡಿದೆ. ಆ ಪಕ್ಷದ ನಾಯಕರು ರಾಜೀನಾಮೆ ಕೊಡುತ್ತಿದ್ದಾರೆ. ಆದರೂ ಉಭಯ ಸದನಗಳಲ್ಲಿ ಬಿಲ್ ಪಾಸ್ ಮಾಡಿದ್ದಾರೆ. ಮುಂದಿನ ಪರಿಣಾಮಗಳಿಗೆ ಕೇಂದ್ರ ಸರ್ಕಾರವೇ ಜವಾಬ್ದಾರಿಯಾಗಿರುತ್ತದೆ. ನಾವೇನು ಮಾಡಬೇಕೆಂದು ವಿಚಾರ ಮಾಡುತ್ತೇವೆ ಎಂದು ಬೋಸರಾಜು ತಿಳಿಸಿದರು.