

ಬೆಂಗಳೂರು: ಪರಿಶಿಷ್ಟ 101 ಜಾತಿಗಳನ್ನು ಮೂರು ಪ್ರವರ್ಗಗಳಲ್ಲಿ ವಿಂಗಡಿಸಿ, ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ.17ರಷ್ಟು ಮೀಸಲಾತಿ ಹಂಚಿಕೆಯಾಗಿದೆ. ಈ ನಿರ್ಧಾರ ಪುನರ್ ಪರಿಶೀಲನೆ ಇಲ್ಲವೇ ಪರಿಷ್ಕರಣೆ ಅಸಾಧ್ಯ ಎಂಬ ದೃಢ ನಿಲುವನ್ನು ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ಸಿಎಂ ಅಧಿಕೃತ ನಿವಾಸ ‘ಕಾವೇರಿ’ ನಿವಾಸದಲ್ಲಿ ಭೇಟಿಯಾದ ಬಿಜೆಪಿ ಸಂಸದ ಗೋವಿಂದ ಕಾರಜೋಳ ನೇತೃತ್ವದ ನಿಯೋಗದ ಮನವಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಒತ್ತಡದಲ್ಲಿ ಮೀಸಲು ವರ್ಗೀಕರಣ ಸೂತ್ರ ಇತ್ಯರ್ಥಪಡಿಸಲಾಗಿದೆ ಎಂಬ ಪರೋಕ್ಷ ಇಂಗಿತ ವ್ಯಕ್ತಪಡಿಸಿದ್ದಾರೆ.
ನ್ಯಾ.ಎಚ್.ಎನ್.ನಾಗಮೋಹನದಾಸ್ ಆಯೋಗದ ಶಿಾರಸು ಪ್ರಕಾರ ಶೇ.1 ಪ್ರತ್ಯೇಕ ಮೀಸಲು ನೀಡಲು ಒತ್ತಾಯಿಸಿ ಧರಣಿ ಹೂಡಿರುವ ಅಲೆಮಾರಿ ಸಮುದಾಯಗಳಿಗೆ ಸ್ಪಂದಿಸಬೇಕು ಎಂದಾಗ ವಿಶೇಷ ಆರ್ಥಿಕ ಪ್ಯಾಕೇಜ್ ಕೊಡೋಣವೆಂದು ಸಿಎಂ ಪುನರುಚ್ಚರಿಸಿದ್ದಾರೆ.
ಆರ್ಥಿಕ ನೆರವಿಗಿಂತ ಮೀಸಲು ಸೌಲಭ್ಯ ಶಾಶ್ವತ ಪರಿಹಾರ ಲಭಿಸುತ್ತದೆ ಎನ್ನುವ ನಿಯೋಗದ ಮನವಿಗೆ ಒಳಮೀಸಲಾತಿ ಮತ್ತೆ ಪರಿಷ್ಕರಿಸಲಾಗದು. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯ ಮೇಲೆ ಯಾವುದೇ ನಿರೀಕ್ಷೆಯಿಟ್ಟುಕೊಳ್ಳಬೇಡಿ ಎಂದು ಸಿಎಂ ಸುಳಿವು ನೀಡಿದ್ದಾರೆ.
ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಸಮುದಾಯಗಳಿಗೆ ಪ್ರತ್ಯೇಕ ಶೇ.1 ಮೀಸಲು ನೀಡಿ ಇಲ್ಲವೇ ಆದಿ ದ್ರಾವಿಡ, ಆದಿ ಆಂಧ್ರ ಸಮುದಾಯಗಳನ್ನು ಎಗೆ ಸೇರಿಸಬೇಕು. ಆದಿ ಕರ್ನಾಟಕ ಸಮುದಾಯವನ್ನು ಬಿಗೆ ಸೇರಿಸಿ ಗೊಂದಲ ಬಗೆಹರಿಸಬೇಕು ಎಂದು ಕಾರಜೋಳ ಮನವಿ ಮಾಡಿದರು. ಈಗಾಗಲೇ ಆದೇಶಿಸಿದ ಒಳಮೀಸಲಾತಿ ಸೂತ್ರದಲ್ಲಿ ಯಾವುದೇ ಮಾರ್ಪಾಡು ಅಸಂಭವವೆಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುಪ್ರೀಂ ಕೋರ್ಟ್ ಆದೇಶ, ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ಆಯೋಗದ ಶಿಾರಸುಗಳ ಸ್ಪಷ್ಟ ಉಲ್ಲಂಸಿ, ರಾಜಕೀಯ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ.
ಬಲಾಢ್ಯ ಸಮುದಯಗಳಿರುವ ಗುಂಪಿಗೆ ಅತ್ಯಂತ ಹಿಂದುಳಿದ ಅಲೆಮಾರಿ ಸಮುದಾಯಗಳನ್ನು ಸೇರಿಸಿ ಸಾಮಾಜಿಕ ನ್ಯಾಯ ನಿರಾಕರಿಸಲಾಗಿದೆ ಎಂದು ಬಿಜೆಪಿ ನಿಯೋಗ ಬೇಸರ ಹೊರ ಹಾಕಿದೆ.
ಮೀಸಲು ವರ್ಗೀಕರಿಸಿ ತಲಾ ಶೇ.6 ಮತ್ತು ಶೇ.5 ಹಂಚಿಕೆ ಮಾಡಿರುವುದು ಪರಿಶಿಷ್ಟರ ಯಾವುದೇ ಸಮುದಾಯಗಳಿಗೆ ಸಮಾಧಾನವಿಲ್ಲ.
ಜನಸಂಖ್ಯೆ, ಹಿಂದುಳಿಯುವಿಕೆ ದೃಷ್ಟಿಯಿಂದ ಮಾದಿಗ ಸಮುದಾಯಗಳಿಗೆ ನ್ಯಾಯಸಮ್ಮತ ಪಾಲು ಸಿಕ್ಕಿಲ್ಲವಾದರೂ ವರ್ಗೀಕರಣವಾಯಿತಲ್ಲ ಎಂಬ ಸಮಾಧಾನದಲ್ಲಿದೆ.
ಪರಿಶಿಷ್ಟರ 101 ಜಾತಿಗಳ ವಿಂಗಡಣೆಯನ್ನೇ ಬಲಗೈ ಸಮುದಾಯಗಳು ಆಂತರಿಕವಾಗಿ ವಿರೋಧ ಮಾಡುತ್ತಿವೆ. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿಗಳ ಸಮಸ್ಯೆ ಬಗೆಹರಿಯುವ ಬದಲು ಮತ್ತೆ ಬಿಗಡಾಯಿಸಿದ್ದರೆ, ಅಲೆಮಾರಿಗಳು ಹೋರಾಟದ ಹಾದಿ ಹಿಡಿದಿದ್ದಾರೆ.
ಎಸ್‌ಸಿ ಒಳಮೀಸಲಾತಿಯನ್ನು ಪ್ರತಿಪಾದಿಸಿದ ಬಿಜೆಪಿ ಮುಂದೆ ದೊಡ್ಡ ಸವಾಲಾಗಿದ್ದು, ಪರಿಶಿಷ್ಟ ಜಾತಿಗಳ ಸಮಸ್ಯೆಯನ್ನು ಪಕ್ಷವೇ ಕೈಗೆತ್ತಿಕೊಂಡು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಇಳಿಯಲು ಗಂಭೀರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.