ಚಾಮುಂಡೇಶ್ವರಿ ದೇಗುಲ ಆಸ್ತಿಗಳಲ್ಲಿ ಬದಲಾವಣೆ ಬೇಡ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

highcourt
Published on

ಬೆಂಗಳೂರು: ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿದ ಚರ ಮತ್ತು ಸ್ಥಿರಾಸ್ತಿಗಳನ್ನು ಸದ್ಯ ಯಾವುದೇ ರೀತಿಯಲ್ಲಿ ಬದಲಾವಣೆ ಮಾಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಸಿಂಧುತ್ವ ಪ್ರಶ್ನಿಸಿ ಮೈಸೂರು ಮಹಾರಾಜರ ಮನೆತನದ ರಾಣಿ ಪ್ರಮೋದಾದೇವಿ ಒಡೆಯರ್ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಕ್ಷೇತ್ರದ ಮಾಲೀಕತ್ವದ ಕುರಿತಾಗಿ ಕಳೆದ 20 ವರ್ಷಗಳಿಗೂ ಹೆಚ್ಚು ಕಾಲದಿಂದ ನ್ಯಾಯಾಲಯದಲ್ಲಿ ವಾಜ್ಯವಿದೆ. 2004ರಲ್ಲಿ ರಾಜಮನೆತನ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಬಳಿಕ ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ. ಈ ಅರ್ಜಿಯ ವಿಚಾರಣೆ ಇಂದಿಗೂ ಪೂರ್ಣಗೊಂಡಿಲ್ಲ. ಪ್ರಕರಣ ನ್ಯಾಯಾಲಯದಲ್ಲಿರುವಾಗ ವಿಧಾನಮಂಡಲದಲ್ಲಿ ವಿಧೇಯಕ ಮಂಡಿಸಿ ಪ್ರಾಧಿಕಾರ ರಚನೆ ಮಾಡಿರುವುದು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 81 ಹಾಗೂ 161ಕ್ಕೆ ತದ್ವಿರುದ್ಧವಾಗಿದೆ. ಫೆ.19ರಂದು ವಿಧೇಯಕ ಮಂಡಿಸಿ, ಫೆ.21ಕ್ಕೆ ಅನುಮೋದನೆ ಪಡೆದುಕೊಳ್ಳಲಾಗಿದೆ. ವಿಧೇಯಕದ ಬಗ್ಗೆ ಚರ್ಚೆ ನಡೆದಿಲ್ಲ. ಹಾಗಾಗಿ, ಅದರ ಸಿಂಧುತ್ವದ ಬಗ್ಗೆ ಪ್ರಶ್ನೆ ಮೂಡಿದೆ.

ಅಲ್ಲದೆ, ಕ್ಷೇತ್ರವು ಮೈಸೂರು ರಾಜಮನೆತನದ ಖಾಸಗಿ ಆಸ್ತಿ. ಅದರಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಪ್ರಾಧಿಕಾರ ರಚನೆಯಿಂದ ಕ್ಷೇತ್ರದ ಆಸ್ತಿ, ವಜ್ರ ವೈಢೂರ‌್ಯಗಳು ಸರ್ಕಾರದ ಸುಪರ್ದಿಗೆ ಹೋಗಲಿದೆ. ಕ್ಷೇತ್ರದ ಧಾರ್ಮಿಕ ವಿಧಿ-ವಿಧಾನಗಳು, ಸಂಪ್ರದಾಯಗಳಲ್ಲಿ ಸರ್ಕಾರದ ಹಸ್ತಕ್ಷೇಪ ಇರಲಿದೆ. ಪ್ರಾಧಿಕಾರ ರಚನೆಗೆ ಮಧ್ಯಂತರ ತಡೆ ನೀಡುವುದರ ಜತೆಗೆ ದೇವಾಲಯದ ಸಂಪ್ರದಾಯಗಳಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬಾರದು. ಚರ ಮತ್ತು ಸ್ಥಿರಾಸ್ತಿಗಳಲ್ಲಿ ಬದಲಾವಣೆ ಮಾಡಬಾರದು ಎಂದು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎನ್.ದೇವದಾಸ್ ವಾದ ಮಂಡಿಸಿ, ಅರ್ಜಿದಾರರ ಪರ ವಕೀಲರು ಸಂಬಂಧಪಡದ ವಿಷಯಗಳನ್ನು ಉಲ್ಲೇಖ ಮಾಡುತ್ತಿದ್ದಾರೆ. ಸಂವಿಧಾನದ 212 ವಿಧಿಯಡಿ ಸರ್ಕಾರಕ್ಕೆ ಅಧಿಕಾರವಿದೆ. ಕಾಯ್ದೆ, ಪ್ರಾಧಿಕಾರದ ಸಿಂಧುತ್ವ ಬೇಕಿದ್ದರೆ ಅರ್ಜಿದಾರರು ಪ್ರಶ್ನಿಸಲಿ. ಆದರೆ, ವಿಧಾನಮಂಡಲದ ಪ್ರಕ್ರಿಯೆ ಪ್ರಶ್ನಿಸುವಂತಿಲ್ಲ. ಅರ್ಜಿದಾರರ ವಾದಗಳಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶಬೇಕು ಎಂದು ಕೋರಿದರು. ವಾದ-ಪ್ರತಿ ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಸೆ.25ಕ್ಕೆ ಮುಂದೂಡಿತು.

ಕೋರ್ಟ್‌ಗೆ ಅಗೌರವ ತೋರಿದ ಸರ್ಕಾರ

ರಾಜಮನೆತನವೇ ಮೇಲ್ಮನವಿಯ ತ್ವರಿತ ವಿಚಾರಣೆಗೆ ಮನವಿ ಮಾಡುತ್ತಿದೆ. ಅಲ್ಲದೆ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳದಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕಳೆದೊಂದು ವರ್ಷದಿಂದ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಪ್ರಕರಣ ನ್ಯಾಯಾಲಯದಲ್ಲಿರುವಾಗ ವಿಧೇಯಕ ತರುವುದಕ್ಕೆ ಮೊದಲು ಸರ್ಕಾರ ನ್ಯಾಯಾಲಯದ ಮೊರೆ ಹೋಗಬಹುದಿತ್ತು. ಅದನ್ನು ಮಾಡದೆ ಪ್ರಾಧಿಕಾರ ರಚಿಸಲಾಗಿದೆ. ಇದೊಂದು ರೀತಿ ನ್ಯಾಯಾಲಯಕ್ಕೆ ಅಗೌರವ ತೋರಿದಂತೆ ಎಂದು ಅರ್ಜಿದಾರರ ಪರ ವಕೀಲರು ಆರೋಪಿಸಿದರು.

ಸರ್ಕಾರ ಮಧ್ಯಪ್ರವೇಶ ಸಲ್ಲ

ಕ್ಷೇತ್ರದಲ್ಲಿ ಯಾರಾದರೂ ಸಾವನ್ನಪ್ಪಿದರೆ ಆ ಇಡೀ ದಿನ ದೇವಸ್ಥಾನ ಬಂದ್ ಮಾಡಲಾಗುತ್ತಿದೆ. ಆದರೆ, ಇತ್ತೀಚೆಗೆ ಸಾವು ಸಂಭವಿಸಿದ್ದರೂ ಪ್ರಭಾವಿ ರಾಜಕಾರಣಿಯೊಬ್ಬರಿಗಾಗಿ ದೇವಸ್ಥಾನ ತೆರೆಯಲಾಗಿತ್ತು. ಚರ ಮತ್ತು ಸ್ಥಿರಾಸ್ತಿಗಳಲ್ಲಿ ವೇಗವಾಗಿ ಬದಲಾವಣೆ ತರಲಾಗುತ್ತಿದೆ. ನಮ್ಮ ಆಚಾರ ವಿಚಾರಗಳಿಗೆ ವಿರುದ್ಧವಾಗಿ ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಿಸಬಹುದು. ಇದು ಒಪ್ಪುವಂತದಲ್ಲ. ಇದನ್ನು ಪರಿಗಣಿಸಿ ಪ್ರಾಧಿಕಾರ ರಚನೆಗೆ ಮಧ್ಯಂತರ ತಡೆ ನೀಡುವುದರ ಜತೆಗೆ ದೇವಾಲಯದ ಸಂಪ್ರದಾಯಗಳಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬಾರದೆಂದು ಸೂಚಿಸಲು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net