ಪ್ರಜ್ವಲ್​ಗಿಲ್ಲ ಬೇಲ್, ಇನ್ನೊಂದು ತೀರ್ಪು ಬಾಕಿ! ಅರ್ಜಿದಾರರ ವಾದವೇನಿತ್ತು?

prajwal revanna
Published on

ಬೆಂಗಳೂರು: ಅತ್ಯಾಚಾರ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ. ಮನೆಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ, ಉಳಿದಂತೆ ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮೇಲೆ ಅತ್ಯಾಚಾರ ಮತ್ತು ಅಶ್ಲೀಲ ವಿಡಿಯೋಗಳ ಹಂಚಿಕೆಯ ಸಂಬಂಧ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಸೋಮವಾರ ಪ್ರಕಟಿಸಿತು. ಆದೇಶದ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಇನ್ನೊಂದು ತೀರ್ಪು ಬಾಕಿ

ನ್ಯಾಯಪೀಠವು ಎರಡು ಅತ್ಯಾಚಾರ, ಒಂದು ಮಹಿಳೆ ಅಶ್ಲೀಲ ದೃಶ್ಯ ಸೆರೆಹಿಡಿದ ಪ್ರಕರಣದ ಜಾಮೀನು ಅರ್ಜಿ ವಜಾಗೊಳಿಸಿದ್ದು, ಇನ್ನೊಂದು ಅತ್ಯಾಚಾರ ಪ್ರಕರಣದ ಆದೇಶ ಪ್ರಕಟಿಸುವುದು ಬಾಕಿಯಿದೆ. ಅದನ್ನು ಮಂಗಳವಾರ ಅಥವಾ ಬುಧವಾರ ಪ್ರಕಟಿಸುವುದಾಗಿ ಪೀಠವು ಮೌಖಿಕವಾಗಿ ಹೇಳಿದೆ.

ಅರ್ಜಿದಾರರ ವಾದವೇನಿತ್ತು

  • ಆರೋಪಿ ಮತ್ತು ಸಂತ್ರಸ್ತೆಯು ವಿಡಿಯೋದಲ್ಲಿರುವುದರ ಕುರಿತು ವಿಧಿ ವಿಜ್ಞಾನ ಪ್ರಯೋಗಾಲಯ ಸ್ಪಷ್ಟತೆ ನೀಡಿಲ್ಲ.
  • ಸಂತ್ರಸ್ತೆಯು ನೀಡಿರುವ ದೂರಿನ ವಿಶ್ವಾಸಾರ್ಹತೆಯ ಬಗ್ಗೆ ಆಕ್ಷೇಪಗಳಿವೆ.
  • ಸಂತ್ರಸ್ತೆಯು ಲೋಕಸಭಾ ಚುನಾವಣೆಯ ಮತ ದಾನಕ್ಕೂ ಕೆಲವು ದಿನಗಳ ಮುಂದೆ ವಿದ್ಯುನ್ಮಾನ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ.
  • ಅಲ್ಲಿ ಅತ್ಯಾಚಾರದ ಆರೋಪ ಮಾಡಿಲ್ಲ.
  • ಸಿಆರ್​ಪಿಸಿ ಸೆಕ್ಷನ್ 164 ಹೇಳಿಕೆಯಲ್ಲಿಯೂ ಅತ್ಯಾಚಾರ ಆರೋಪ ಮಾಡಿಲ್ಲ. 5 ವರ್ಷ ತಡವಾಗಿ ದೂರು ನೀಡಿರುವುದಕ್ಕೆ ವಿವರಣೆ ಕೂಡ ನೀಡಿಲ್ಲ
  • ಸಂತ್ರಸ್ತೆಯ ಪುತ್ರಿ ಹೇಳಿಕೆಯನ್ನು ಸಾಕ್ಷ್ಯವಾಗಿ ಪರಿಗಣಿಸಲಾಗಿದೆ. ಆಕೆ ಹೇಳಿಕೆಯಲ್ಲಿ ವ್ಯತ್ಯಾಸಗಳಿವೆ.
  • ಒಂದೊಮ್ಮೆ ಅತ್ಯಾಚಾರದ ಕೃತ್ಯ ನಡೆದಿದ್ದರೂ ಇದು ಒಪ್ಪಿಗೆಯಿಂದ ನಡೆದ ಕೃತ್ಯ

ಸರ್ಕಾರದ ವಾದವೇನಿತ್ತು?

  • ಶಾಸಕ ಎಚ್.ಡಿ.ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಆರಂಭವಾಗುತ್ತಿದ್ದಂತೆ ಪುತ್ರ ಪ್ರಜ್ವಲ್ ವಿರುದ್ಧ ಅತ್ಯಾಚಾರದ ಆರೋಪ
  • ಸಂತ್ರಸ್ತೆಯರಿಗೆ ಕೊಲೆ, ಅಶ್ಲೀಲ ವಿಡಿಯೋ ಬಿಡುಗಡೆ ಮಾಡುವುದಾಗಿಯೂ ಬೆದರಿಕೆ
  • ಈ ಹಿನ್ನೆಲೆ ತಡವಾಗಿ ದೂರು ದಾಖಲಿಸಿದ ಸಂತ್ರಸ್ತೆಯರು
  • ದೂರು ದಾಖಲಾಗುತ್ತಿದ್ದಂತೆ ಪ್ರಜ್ವಲ್ ದೇಶ ತೊರೆದ ಆರೋಪಿ
  • ತನ್ನ ಫೋನ್ ಅನ್ನು ತನಿಖಾಧಿಕಾರಿಗಳಿಗೆ ಒಪ್ಪಿಸಲು ನಕಾರ
  • ಸಂತ್ರಸ್ತೆಯ ಪುತ್ರಿಯ ಹೇಳಿಕೆ ಹಾಗೂ ಎಫ್​ಎಸ್​ಎಲ್ ವರದಿ ಕೃತ್ಯ ಖಾತರಿ
  • ಪ್ರಜ್ವಲ್ ಶೌಚಾಲಯದಲ್ಲಿ ತೆಗೆದಿರುವ ಚಿತ್ರಗಳು, ಸ್ಥಳದ ಪಂಚನಾಮೆ, ಎಫ್​ಎಸ್​ಎಲ್ ವರದಿ ಎಲ್ಲವೂ ಹೊಂದಾಣಿಕೆಯಾಗಿದೆ ಎಂದು ಆಕ್ಷೇಪ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net