

ಬೆಂಗಳೂರು: ಖಾಸಗಿ ಮನೆ ಬಾಡಿಗೆ ಪಡೆದು ವಾಸವಿದ್ದರೆ ಸರ್ಕಾರವೇ ಪೂರ್ಣ ಬಾಡಿಗೆ ಭತ್ಯೆ ಕೊಡಬೇಕೆಂಬ ಐಪಿಎಸ್ ಅಧಿಕಾರಿಗಳ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ಮತ್ತೊಂದೆಡೆ ಪೊಲೀಸ್ ಇಲಾಖೆ ಮನೆ ಬಾಡಿಗೆ ಭತ್ಯೆ ಸಂಬಂಧ ಮಾರ್ಗಸೂಚಿ ರಚಿಸುವ ಮೂಲಕ ಅಧಿಕಾರಿ, ಸಿಬ್ಬಂದಿಗೆ ಕಟ್ಟಾಜ್ಞೆ ಹೊರಡಿಸಿ ಐಪಿಎಸ್ ಅಧಿಕಾರಿಗಳಿಗೆ ಕಿವಿ ಹಿಂಡಿದೆ. ಇತ್ತೀಚೆಗೆ ಐಪಿಎಸ್ ಅಧಿಕಾರಿಗಳಾದ ಹರಿರಾಮ್ ಶಂಕರ್ ಮತ್ತು ಎನ್.ಯತೀಶ್ ಖಾಸಗಿ ಮನೆ ಬಾಡಿಗೆಗೆ ಪಡೆದು ನೆಲೆಸಿದ್ದು, ಸರ್ಕಾರ ನಿಗದಿ ಮಾಡಿದ ಬಾಡಿಗೆ ಭತ್ಯೆಗಿಂತ ಹೆಚ್ಚುವರಿ ಹಣ ಪಾವತಿಸುತ್ತಿದ್ದಾರೆ. ಈ ವ್ಯತ್ಯಾಸದ ಮೊತ್ತ ಪಾವತಿಸಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪತ್ರ ಬರೆದಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಐಪಿಎಸ್ ಅಧಿಕಾರಿಗಳ ಮನವಿಯನ್ನು ತಿರಸ್ಕರಿಸಿದೆ. ಈ ಸಂಬಂಧ ಆರ್ಥಿಕ ಇಲಾಖೆ ‘ಅಖಿಲ ಭಾರತ (ಮನೆ ಬಾಡಿಗೆ ಭತ್ಯೆ) ನಿಯಮಗಳು-1977 ಅನ್ವಯ ರಾಜ್ಯ ಸರ್ಕಾರಿ ನೌಕರರಿಗೆ ಲಭ್ಯವಿರುವ ಮನೆ ಬಾಡಿಗೆ ಭತ್ಯೆ ದರ ಅಖಿಲ ಭಾರತ ಸೇವೆಗೆ ಸೇರಿದ ಅಧಿಕಾರಿಗಳಿಗೂ ಅನ್ವಯ ಆಗಲಿದೆ. ನಿಯಮಗಳಲ್ಲಿ ಖಾಸಗಿ ಗೃಹ ಬಾಡಿಗೆ ಪಡೆದಿದ್ದರೇ ಬಾಡಿಗೆ ಮೊತ್ತವನ್ನು ಮಂಜೂರು ಮಾಡಲು ಅವಕಾಶ ಇರುವುದಿಲ್ಲ. ನಿಗಮ ಮತ್ತು ರಾಜ್ಯ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ ಮಂಜೂರಾತಿ ಕುರಿತಂತೆ 2012ರ ಅಕ್ಟೊಬರ್ 19ರಂದು ಮಾರ್ಗಸೂಚಿ ಹೊರಡಿಸಲಾಗಿದೆ. ಖಾಸಗಿ ಗೃಹವನ್ನು ಬಾಡಿಗೆ ಆಧಾರದ ಮೇಲೆ ಪಡೆದ ವೇಳೆ ನೌಕರರು ಹೆಚ್ಚುವರಿ ಪಾವತಿಸಿದ ಬಾಡಿಗೆ ಮೊತ್ತವನ್ನು ಮಂಜೂರು ಮಾಡಲು ಸರ್ಕಾರದ ನಿಯಮದಲ್ಲಿ ಅವಕಾಶ ಇರುವುದಿಲ್ಲ. ಸರ್ಕಾರ ನಿಗದಿ ಮಾಡಿರುವ ಬಾಡಿಗೆ ಭತ್ಯೆಗೂ ಮತ್ತು ಖಾಸಗಿ ಗೃಹ ಬಾಡಿಗೆಗೆ ವ್ಯತ್ಯಾಸದ ಮೊತ್ತವನ್ನು ಸ್ವಂತ ಹಣದಲ್ಲಿ ಪಾವತಿಸುವಂತೆ ಅಧಿಕಾರಿಗಳಿಗೆ ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಒಂದೆಡೆ ಕೆಳ ಹಂತದ ಪೊಲೀಸ್ ಸಿಬ್ಬಂದಿ ಶಿಥಿಲಗೊಂಡಿರುವ ಕ್ವಾರ್ಟರ್ಸ್ನಲ್ಲಿ ಜೀವ ಕೈಯಲ್ಲಿ ಹಿಡಿದು ನೆಲೆಸಿದ್ದಾರೆ. ಇದರ ನಡುವೆ ದುಬಾರಿ ಬೆಲೆಯ ಖಾಸಗಿ ಮನೆ ಬಾಡಿಗೆಗೆ ಪಡೆದು ಸರ್ಕಾರವೇ ಹೆಚ್ಚುವರಿ ಬಾಡಿಗೆ ಮೊತ್ತ ನೀಡಬೇಕೆಂದು ಪತ್ರ ಬರೆದಿರುವುದು ಸೋಜಿಗವಾಗಿದೆ.
ಐಎಎಸ್ ದುಂಬಾಲು: ಐಪಿಎಸ್ ಅಲ್ಲದೆ, ಐಎಎಸ್ ಅಧಿಕಾರಿಗಳೂ ಖಾಸಗಿ ಮನೆಗಳಲ್ಲಿ ಬಾಡಿಗೆಗಿದ್ದಾರೆ. ಇದರಿಂದ ಹುದ್ದೆಗೆ ತಕ್ಕಂತೆ ಸರ್ಕಾರ ನಿಗದಿ ಮಾಡಿರುವ ಬಾಡಿಗೆ ಭತ್ಯೆಗೂ ಮತ್ತು ವಾಸ್ತವಿಕ ಬಾಡಿಗೆ ಮೌಲ್ಯಕ್ಕೂ ವ್ಯತ್ಯಾಸ ಇರುವ ಮೊತ್ತ ಪಾವತಿ ಮಾಡಬೇಕೆಂದು ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಸರ್ಕಾರಿ ವಸತಿಗೃಹದಲ್ಲಿ ನೆಲೆಸಿರುವ ಅಧಿಕಾರಿ, ಸಿಬ್ಬಂದಿಗೆ ಬಾಡಿಗೆ ಭತ್ಯೆ ಸಿಗುವುದಿಲ್ಲ. ಕ್ವಾರ್ಟರ್ಸ್ ಸೌಲಭ್ಯ ಪಡೆಯದಿದ್ದರೇ ಅಂತವರಿಗೆ ಸರ್ಕಾರ ನಿಗದಿ ಮಾಡಿರುವ ಬಾಡಿಗೆ ಭತ್ಯೆ ಪಡೆಯಲು ಅರ್ಹರಾಗಿ ದ್ದಾರೆ. ಹೆಚ್ಚುವರಿ ಮೊತ್ತ ಸಿಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.