

ಬೆಂಗಳೂರು: ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ವಿದ್ಯಾರ್ಥಿವೇತನ (ಎನ್‌ಎಂಎಂಎಸ್) ಪರೀಕ್ಷೆಗೆ ಈ ವರ್ಷದಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಆನ್‌ಲೈನ್‌ಗೆ ಬದಲಾಯಿಸಿದೆ.
ಇಲ್ಲಿಯವರೆಗೂ ಆ್ಲೈನ್‌ನಲ್ಲಿ ಅರ್ಜಿ ಸಲ್ಲಿಸಲಾಗುತ್ತಿತ್ತು. ಆದರೆ, ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನಿರ್ದೇಶನದ ಮೇರೆಗೆ ಪ್ರಕ್ರಿಯೆಯನ್ನು ಡಿಜಿಟಲ್ ಮಾದರಿಗೆ ಪರಿವರ್ತಿಸಲಾಗಿದೆ ಎಂದು ಕರ್ನಾಟಕ ಶಾಲಾ ಗುಣಮಟ್ಟ, ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತಿನ (ಕೆಎಸ್‌ಕ್ಯುಎಎಸಿ) ಕಾರ್ಯನಿರ್ವಾಹಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
2026-27ನೇ ಸಾಲಿನಲ್ಲಿ ಸರ್ಕಾರಿ, ಅನುದಾನಿತ ಮತ್ತು ಸ್ಥಳೀಯ ಸಂಸ್ಥೆಗಳ ಶಾಲೆಗಳಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅ.30 ಕೊನೆಯ ದಿನವಾಗಿದೆ. ಡಿ.20ರಂದು ಎನ್‌ಎಂಎಂಎಸ್ ಪರೀಕ್ಷೆ ನಡೆಸಲಾಗುತ್ತಿದೆ.
7ನೇ ತರಗತಿಯಲ್ಲಿ ಸಾಮಾನ್ಯ ಮತ್ತು ಹಿಂದುಳಿದ ವರ್ಗದವರು ಶೇ.55 ಅಂಕ, ಪರಿಶಿಷ್ಟ ಜಾತಿ/ಪಂಗಡದವರು ಶೇ.50 ಪಡೆದಿರುವವರು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.
ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯದಂತೆ ತಡೆಯುವುದು, ವಿದ್ಯಾಭ್ಯಾಸದ ಮುಂದುವರಿಕೆಗೆ ಪ್ರೇರೇಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಎರಡೂ ಪರೀಕ್ಷೆಯಲ್ಲಿ ಸರಾಸರಿ ಶೇ.40 (ಎಸ್‌ಸಿ/ಎಸ್‌ಟಿ- ಶೇ.32) ಅಂಕ ಪಡೆದವರು ಶಿಷ್ಯವೇತನಕ್ಕೆ ಅರ್ಹತೆ ಪಡೆಯಲಿದ್ದಾರೆ. ಮೀಸಲಾತಿ ನಿಯಮಗಳ ಪ್ರಕಾರ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ 9ರಿಂದ 12ನೇ ತರಗತಿವರೆಗೆ ಮಾಸಿಕ ಒಂದು ಸಾವಿರ ರೂ. ಶಿಷ್ಯವೇತನ ಸಿಗಲಿದೆ.