ಕ್ರಾಂತಿಕಾರಿಗಳಿಗೆ ಪ್ರೇರಣೆಯಾದ ನಿವೇದಿತಾ

niveditha
Published on

| ಪ್ರಿಯಾ ಶಿವಮೊಗ್ಗ

ಸ್ವಾತಂತ್ರ್ಯ ಹೋರಾಟಗಾರರು ಎಂದಾಕ್ಷಣ ನಮ್ಮ ಮನಃಪಟಲದಲ್ಲಿ ನೂರಾರು ಹೆಸರುಗಳು ಹಾದುಹೋಗುತ್ತವೆ. ಆದರೆ, ಈ ಹೆಸರುಗಳಲ್ಲಿ ಐರ್ಲೆಂಡಿನಿಂದ ಬಂದು, ತಾಯಿ ಭಾರತಿಗಾಗಿ ತನ್ನ ಸರ್ವಸ್ವವನ್ನೂ ಅರ್ಪಿಸಿದ, ಸಿಡಿಲ ಸಂತ ಸ್ವಾಮಿ ವಿವೇಕಾನಂದರ ಮಾನಸಪುತ್ರಿ ಸೋದರಿ ನಿವೇದಿತೆಯ ಹೆಸರು ಮಾತ್ರ ನೆನಪಾಗುವುದು ಅತಿವಿರಳ. ತನ್ನ ತಾಯ್ನಾಡನ್ನು ಬಿಟ್ಟು ಭಾರತಕ್ಕೆ ಬಂದ ಮಾರ್ಗರೇಟ್ ನೊಬೆಲ್ ಕೊನೆಯುಸಿರಿನವರೆಗೂ ಭಾರತದ ಮುಕ್ತಿಗಾಗಿ ಕಾದಾಡಿದಳು. ಸ್ವಾಮಿ ವಿವೇಕಾನಂದರು ಆಕೆಗೆ ದೀಕ್ಷೆಯಿತ್ತು ನಿವೇದಿತಾ ಎಂಬ ಹೆಸರನ್ನಿತ್ತರು, ಆಕೆ ತನ್ನನ್ನು ತಾನು ಭಾರತಕ್ಕಾಗಿ ನಿವೇದಿಸಿಕೊಂಡು ಆ ಹೆಸರಿಗೆ ಅನ್ವರ್ಥವಾಗಿ ಬದುಕಿದಳು.

ವಿವೇಕಾನಂದರ ದೇಹತ್ಯಾಗದ ನಂತರ ಅಕ್ಕ ನಿವೇದಿತಾ, ಗುರುವಿನ ಪ್ರೇರಣೆ ಯಂತೆ ಸಂಪೂರ್ಣವಾಗಿ ಭಾರತದ ಸ್ವಾತಂತ್ರ್ಯಕ್ಕಾಗಿ ಕಾದಾಡುವ ಸಂಕಲ್ಪ ಮಾಡಿದಳು. 1902-03ರ ನಂತರ ಬಂಗಾಳದಲ್ಲಿ ನಡೆದ ಕ್ರಾಂತಿಕಾರಿ ಚಟುವಟಿಕೆಗಳ ಹಿಂದೆ ನಿವೇದಿತಾ ಪಾತ್ರ ಬಲು ಮಹತ್ವದ್ದು. ಬಂಗಾಳದಲ್ಲಿ ಬ್ರಿಟಿಷರ ಕ್ರೌರ್ಯ ಹಿಂದೆಂದಿಗಿಂತಲೂ ಹೆಚ್ಚಿದ್ದ ಕಾಲವದು. ಅಕ್ಕ ನಿವೇದಿತಾ ರಾಜ್ಯ-ರಾಜ್ಯಗಳ ಪ್ರವಾಸ ಮಾಡಿ ತರುಣರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಲು ಪ್ರೇರಣೆ ನೀಡಿದಳು. ಕ್ರಾಂತಿಕಾರಿಗಳೊಡನೆ ವೈಯಕ್ತಿಕ ಸಂಪರ್ಕವಿರಿಸಿಕೊಂಡಿದ್ದ ಆಕೆ, ಅವರಿಗೆ ಪ್ರೇರಣೆ ತುಂಬುವ, ಗುಪ್ತಸಭೆಗಳನ್ನು ಆಯೋಜಿಸುವ ಹಲವಾರು ಕಾರ್ಯಗಳನ್ನು ಮಾಡುತ್ತಿದ್ದಳು. ಆಕೆಯ ಓತಪ್ರೋತ ಮಾತುಗಳಿಂದ ಪ್ರಭಾವಗೊಂಡು ಕ್ರಾಂತಿಕಾರ್ಯಕ್ಕೆ ಧುಮುಕಿದವರು ಹಲವರು. 1902ರಲ್ಲಿ ಅರವಿಂದ ಘೊಷರ ಮಾರ್ಗದರ್ಶನದಲ್ಲಿ ಹುಟ್ಟಿಕೊಂಡ ಕ್ರಾಂತಿಕಾರಿ ಸಂಘಟನೆ ಅನುಶೀಲನ ಸಮಿತಿಯ ಹಲವು ಕ್ರಾಂತಿಕಾರಿಗಳೊಡನೆ ನಿವೇದಿತಾ ನೇರ ಸಂಪರ್ಕದಲ್ಲಿದ್ದಳು. ಅನುಶೀಲನ ಸಮಿತಿಯ ಗ್ರಂಥಾಲಯಕ್ಕೆ ನಿವೇದಿತಾ ನೂರಕ್ಕೂ ಹೆಚ್ಚು ದೇಶಭಕ್ತಿಯ ಪುಸ್ತಕಗಳನ್ನು ಕೊಡುಗೆ ನೀಡಿದ್ದರಂತೆ. ಬಂಗಾಳದ ಹುಲಿ ಎಂದೇ ಖ್ಯಾತನಾಗಿದ್ದ ಜತೀಂದ್ರನಾಥ್ ಮುಖರ್ಜಿ ಯೌವ್ವನದ ಕಾಲದಿಂದಲೂ ಅಕ್ಕನ ಮಾತುಗಳನ್ನು ಕೇಳುತ್ತ ಬೆಳೆದವನು. ಬಂಗಾಳದಲ್ಲಿ ಪ್ಲೇಗ್ ಹೆಚ್ಚಾದಾಗ ಸ್ವಾಮಿ ವಿವೇಕಾನಂದರು ನಿವೇದಿತೆಯ ನೇತೃತ್ವದಲ್ಲಿ ಪ್ಲೇಗ್ ನಿವಾರಣಾ ತಂಡವನ್ನು ಪ್ರಾರಂಭಿಸಿದ್ದರು. ನಿವೇದಿತಾ ಪ್ಲೇಗ್ ರೋಗಿಗಳ ಮನೆ-ಮನೆಗೆ ತೆರಳಿ ಶುಶ್ರೂಷೆ ಮಾಡಿದ್ದಲ್ಲದೆ, ಬೀದಿಗಳ ಸ್ವಚ್ಛತೆಯಲ್ಲಿ ತೊಡಗಿಕೊಂಡಳು. ಆಗ ನಿವೇದಿತಾ ಮಾತನ್ನು ಕೇಳಿ ಪ್ರಭಾವಿತಗೊಂಡು ಸೇವಾಕಾರ್ಯಕ್ಕೆ ಧುಮುಕಿದವನು ದಿಟ್ಟ ಕ್ರಾಂತಿಕಾರಿ ಬಾಘಾ ಜತಿನ್. ಬಾಘಾ ಜತೀನ್​ನ ಆರೋಗ್ಯ ಹದಗೆಟ್ಟಾಗ, ‘ನೀನು ಮುಂಬರುವ ದಿನಗಳಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸಬೇಕಾಗಿದೆ. ಅದು ಅತ್ಯಂತ ಗುರುತರವಾದದ್ದು’ ಎಂದು ಪ್ರೇರಣೆ ತುಂಬಿದ್ದು ನಿವೇದಿತೆಯೇ!

ಅಕ್ಕನ ಪ್ರಭಾವಕ್ಕೊಳಗಾಗಿ ಜೀವನವನ್ನು ನೋಡುವ ದೃಷ್ಟಿಯನ್ನೇ ಬದಲಾಯಿಸಿಕೊಂಡವರು ತಮಿಳುನಾಡಿನ ಕ್ರಾಂತಿಕಾರಿ ಕವಿ ಸುಬ್ರಹ್ಮಣ್ಯ ಭಾರತಿ. ಭಾರತಿಯವರು ‘ಸ್ವದೇಶ ಗೀತಾಂಜಲಿ’ ಎಂಬ ಪುಸ್ತಕವನ್ನು ಬರೆದು, ‘ಭಗವಾನ್ ಕೃಷ್ಣ ಅರ್ಜುನನಿಗೆ ವಿಶ್ವರೂಪ ದರ್ಶನ ಮಾಡಿಸಿ ಆತ್ಮತತ್ತ್ವವನ್ನು ವಿವರಿಸಿದ ಹಾಗೆ, ನನಗೆ ಭಾರತಮಾತೆಯ ಸಂಪೂರ್ಣ ದರ್ಶನ ಮಾಡಿಸಿ, ಸ್ವದೇಶಭಕ್ತಿಯನ್ನು ಅರ್ಥಮಾಡಿಸಿದ ಗುರುವಿನ ಪಾದಗಳಿಗೆ ಸಮರ್ಪಿಸುತ್ತೇನೆ’ ಎಂದಿದ್ದಾರೆ. ಆ ಗುರು ಬೇರಾರೂ ಅಲ್ಲ, ಅಕ್ಕ ನಿವೇದಿತೆಯೇ! ‘ಜನ್ಮಭೂಮಿ’ ಎಂಬ ಕೃತಿಯನ್ನು ರಚಿಸಿ, ‘ಭಾರತಮಾತೆಗೆ ಸೇವೆ ಸಲ್ಲಿಸುವ ರೀತಿಯನ್ನು ಮತ್ತು ತ್ಯಾಗದ ಉನ್ನತ ಆದರ್ಶವನ್ನು ಕ್ಷಣಮಾತ್ರದಲ್ಲಿ ನನಗೆ ತಿಳಿಸಿಕೊಟ್ಟ ಗುರುಮಣಿ, ವಿವೇಕಾನಂದರ ಆಧ್ಯಾತ್ಮಿಕ ಪುತ್ರಿ ನಿವೇದಿತಾ ದೇವಿಯವರಿಗೆ ಸಮರ್ಪಿಸುತ್ತೇನೆ’ ಎಂದು ಬರೆದಿದ್ದಾರೆ.

ನಿವೇದಿತೆಯನ್ನು ತಮ್ಮ ಮಾರ್ಗದರ್ಶಕರಂತೆ ಕಾಣುತ್ತಿದ್ದವರು ಮತ್ತೊಬ್ಬ ಶ್ರೇಷ್ಠ ಕ್ರಾಂತಿಕಾರಿ, ಸ್ವಾಮಿ ವಿವೇಕಾನಂದರ ತಮ್ಮ- ಭೂಪೇಂದ್ರನಾಥ ದತ್ತ. ವಿವೇಕಾನಂದರ ದೇಹತ್ಯಾಗದ ನಂತರ ಅಕ್ಕ ಮತ್ತು ಅರವಿಂದ ಘೊಷರು ಬಂಗಾಳದ ಯುವಕರಲ್ಲಿ ರಾಷ್ಟ್ರೀಯತೆಯ ಕಿಡಿ ಹೊತ್ತಿಕೊಳ್ಳುವಂತೆ ಮಾಡುವ ಪ್ರಯತ್ನದಲ್ಲಿ ನಿರತರಾಗಿದ್ದರು. ಆಗೆಲ್ಲ ಅಕ್ಕನ ಮಾತುಗಳು ಯುವ ಕ್ರಾಂತಿಕಾರಿಗಳಿಗೆ ಪ್ರೇರಣಾ ಸ್ರೋತ. ಭೂಪೇಂದ್ರನಾಥ ದತ್ತ ಮತ್ತು ಅರವಿಂದಘೊಷರ ತಮ್ಮ ಬಾರೀಂದ್ರ ಘೊಷರು ನಡೆಸುತ್ತಿದ್ದ ‘ಯುಗಾಂತರ’ ಪತ್ರಿಕೆಗೆ ಅಕ್ಕನ ಬೆಂಬಲವಿತ್ತು. ಅಕ್ಕ ಹಲವು ಬಾರಿ ಅಂಕಣಗಳನ್ನು ಬರೆದಿದ್ದಳು ಕೂಡ. ಭೂಪೇಂದ್ರನನ್ನು ಆಂಗ್ಲರು ಬಂಧಿಸಿ, ಒಂದು ವರ್ಷ ಕಾರಾಗೃಹ ವಾಸ ಶಿಕ್ಷೆಯನ್ನು ನೀಡಿದ್ದರು. ಆಗ ಆತನನ್ನು ಭೇಟಿಮಾಡಿ ಆತನಿಗೆ ಉಪಯೋಗವಿದ್ದ ಪುಸ್ತಕಗಳನ್ನು ಕೊಟ್ಟಿದ್ದಳು ನಿವೇದಿತಾ.

ಅಕ್ಕ 1903ರಲ್ಲಿ ಮೇದಿನೀಪುರದಲ್ಲಿ ನೀಡಿದ ಸರಣಿ ಉಪನ್ಯಾಸಗಳಿಂದ ಪ್ರಭಾವಿತಗೊಂಡು ಕ್ರಾಂತಿಕಾರ್ಯಕ್ಕೆ ಧುಮುಕಿದ್ದು ಖುದಿರಾಂ ಬೋಸ್. ವಕೀಲಿ ಪದವಿಯನ್ನು ಗಳಿಸಿ, ಅದನ್ನು ವೃತ್ತಿಯನ್ನಾಗಿಸಿಕೊಳ್ಳದೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದ ಲಲಿತ್ ಚಟರ್ಜಿ ಅಕ್ಕ ಹೇಳಿದ ಕೆಲಸಗಳಲ್ಲೆಲ್ಲ ಸದಾ ಮುಂದು. ಅರವಿಂದ ಘೊಷರನ್ನು ಬ್ರಿಟಿಷರು ಬಂಧಿಸುವ ಸುದ್ದಿ ತಿಳಿದಾಗ, ಅವರು ಸಂಪಾದಕರಾಗಿ ನಡೆಸುತ್ತಿದ್ದ ‘ವಂದೇಮಾತರಂ’ ಪತ್ರಿಕೆಯ ಜವಾಬ್ದಾರಿ ಹೊತ್ತಿದ್ದು ನಿವೇದಿತೆಯೇ. ಯೋಗಿ ಅರವಿಂದರು, ರವೀಂದ್ರನಾಥ ಟ್ಯಾಗೋರರು, ಬಾರೀಂದ್ರ ಘೊಷ್, ಗೋಪಾಲಕೃಷ್ಣ ಗೋಖಲೆ ಹೀಗೆ ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ಭಗಿನಿಯಾಗಿ, ಸ್ನೇಹಿತೆಯಾಗಿ, ಮಾರ್ಗದರ್ಶಕಳಾಗಿ, ಪ್ರೇರಣಾ ಸ್ರೋತವಾಗಿ ನಿಂತವರು ನಿವೇದಿತಾ. ಸ್ವಾಮಿ ವಿವೇಕಾನಂದರು ‘ಭಾರತ ನಿವೇದಿತೆಯೊಡನೆ ಝೇಂಕೃತಗೊಳ್ಳುತ್ತದೆ’ ಎಂದಿದ್ದರು. ಭಾರತವನ್ನೇ ಉಸಿರಾಡಿದ ನಿವೇದಿತಾಗೆ ಕೋಟಿ ನಮನಗಳು.

(ಲೇಖಕಿ ಸೋದರಿ ನಿವೇದಿತಾ ಪ್ರತಿಷ್ಠಾನದ ಕಾರ್ಯಕರ್ತೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net