ನಿಟ್ಟೂರು ಗ್ರಾಪಂ ಸದಸ್ಯನ ಮೇಲೆ ಹಲ್ಲೆ

hos crime (1)
ಆರೋಪಿ ಕರ್ಕಮುಡಿ ದೇವರಾಜ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ನಿಟ್ಟೂರು ಗ್ರಾಮದ ಪ್ರಮುಖರು ಎಎಸ್‌ಐ ಕುಮಾರ್‌ಗೆ ಮನವಿ ಸಲ್ಲಿಸಿದರು.
Published on

ಹೊಸನಗರ: ನಿಟ್ಟೂರು ಗ್ರಾಪಂ ವ್ಯಾಪ್ತಿಯಲ್ಲಿ ಭಾನುವಾರ ಗ್ರಾಪಂ ಸದಸ್ಯ ಬರುತ್ತಿದ್ದ ಬೈಕ್ ಅಡ್ಡಗಟ್ಟಿ ಏಕಾಏಕಿ ಹಲ್ಲೆ ನಡೆಸಲಾಗಿದೆ. ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬೈಕ್‌ನಲ್ಲಿ ಬರುತ್ತಿದ್ದ ವಿಶ್ವನಾಥ ನಾಗೋಡಿ ಅವರನ್ನು ಅಡ್ಡಗಟ್ಟಿದ ಕರ್ಕಮುಡಿ ನಿವಾಸಿ ದೇವರಾಜ ಎಂಬಾತ ಅಡ್ಡಗಟ್ಟಿ ಥಳಿಸಿದ್ದಾನೆ. ಅಲ್ಲೇ ಇದ್ದ ಸ್ಥಳೀಯರು ತಡೆದಿದ್ದಾರೆ.

ವಿಶ್ವನಾಥ ನಾಗೋಡಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಅತ್ತಿಗೆ ರೂಪಶ್ರೀ ಗೌರಿ ಭಾನುವಾರ ನಡೆದ ನಿಟ್ಟೂರು ಸೊಸೈಟಿ ನಿರ್ದೇಶಕರ ಚುನಾವಣೆಯಲ್ಲಿ ಪದ್ಮರಾಜ ವಿರುದ್ಧ ಸೋತಿದ್ದಾರೆ. ಆ ದಿನ ಸಂಜೆ ಹೋಟೆಲ್‌ನಲ್ಲಿ ಉಪಹಾರ ಮುಗಿಸಿ ಮನೆಗೆ ಹೋಗುತ್ತಿದ್ದ ವೇಳೆ ದೇವರಾಜ ನನ್ನ ಬೈಕ್‌ನ್ನು ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿ ಚುನಾವಣೆಯಲ್ಲಿ ನಿನ್ನ ಅತ್ತಿಗೆಯನ್ನು ಗೆಲ್ಲಿಸುವ ತಾಕತ್ತು ಇಲ್ಲದವನು, ನನ್ನ ಅಣ್ಣನ ಬಗ್ಗೆ ಮಾತನಾಡುತ್ತೀಯ ಅಂದವನೇ ಏಕಾಏಕಿ ಹಲ್ಲೆ ಮಾಡಿದ್ದಾನೆ. ಆಗ ಸ್ಥಳದಲ್ಲಿದ್ದ ರಾಘವೇಂದ್ರ, ರವೀಂದ್ರ, ಚಂದ್ರಶೇಖರ್, ಹಲ್ಲೆಯಿಂದ ತಪ್ಪಿಸಿ ಮನೆಗೆ ಹೋಗುವಂತೆ ತಿಳಿಸಿದ್ದಾರೆ. ನಾನು ಮನೆಗೆ ಹೊರಟಿದ್ದಾಗ ಹಿಂಬಾಲಿಸಿ ಬಂದ ಆರೋಪಿ ದೇವರಾಜ, ನಿನ್ನನ್ನು ಬಿಡುವುದಿಲ್ಲ ಎಂದು ಮತ್ತೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಿಟ್ಟೂರು ಗ್ರಾಪಂ ಸದಸ್ಯ ವಿಶ್ವನಾಥ ನಾಗೋಡಿ ವಿರುದ್ಧ ಏಕಾಏಕಿ ನಡೆದ ಹಲ್ಲೆಯನ್ನು ಹಲವು ಪ್ರಮುಖರು ಖಂಡಿಸಿ ಪ್ರತಿಭಟಿಸಿದ್ದಾರೆ. ನಗರ ಪೊಲೀಸ್ ಠಾಣೆಗೆ ತೆರಳಿ, ದೇವರಾಜ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಿರಂತರ ದೌರ್ಜನ್ಯ ನಡೆಸಿ ನಿಟ್ಟೂರು ಗ್ರಾಮದಲ್ಲಿ ಶಾಂತಿಭಂಗ ಮಾಡುತ್ತಿರುವ ವಿರುದ್ಧ ಗೂಂಡಾ ಕಾಯ್ದೆ ಹಾಕಬೇಕು ಎಂದು ಆಗ್ರಹಿಸಿದರು. ಕೆಡಿಪಿ ಸದಸ್ಯ ನಾಗೇಂದ್ರ, ಜೋಗಿ, ಗ್ರಾಪಂ ಸದಸ್ಯರಾದ ಅಶೋಕ ಕುಂಬ್ಳೆ, ಶೋಭಾ ಉದಯ್, ರಾಘವೇಂದ್ರ ಆಚಾರ್, ಪ್ರಮುಖರಾದ ಸತ್ಯನಾರಾಯಣ ಕೊಳಕಿ, ಮಂಜಪ್ಪ ಬೆನ್ನಟ್ಟೆ, ರವಿ, ಚನ್ನಪ್ಪ, ವೆಂಕಟರಮಣ ಭಟ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net