

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಉತ್ತರಪ್ರದೇಶದ ವಾರಾಣಸಿ ಕ್ಷೇತ್ರದಿಂದ ಅವರ ವಿರುದ್ಧ ಇಂಡಿಯಾ ಒಕ್ಕೂಟದಿಂದ ಸಂಭಾವ್ಯ ಇಬ್ಬರ ಹೆಸರು ಕೇಳಿಬಂದಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಲ್ಲವೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿದೆ. 2014ರಲ್ಲಿ ಒಮ್ಮೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅರವಿಂದ ಕೇಜ್ರಿವಾಲ್ ಕೂಡ ಈ ಸಲ ಇನ್ನೊಮ್ಮೆ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ನಿತೀಶ್-ಪ್ರಿಯಾಂಕಾ ಬಳಿಕ ಮೂರನೇ ಆಯ್ಕೆ ಆಗಿ ಕೇಜ್ರಿವಾಲ್ ಹೆಸರು ಕೂಡ ಕೇಳಿ ಬಂದಿದೆ. ಈ ಕ್ಷೇತ್ರದ ಜನರು 2004ರಲ್ಲಿ ಒಮ್ಮೆ ಹೊರತುಪಡಿಸಿ 1991ರಿಂದ ಬಿಜೆಪಿಯನ್ನೇ ಆರಿಸುತ್ತಿದ್ದಾರೆ. 2014 ಮತ್ತು 2019ರಲ್ಲಿ ನರೇಂದ್ರ ಮೋದಿ ಇದೇ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದಾರೆ.
ಅಮಾನತು ಸಂಸದರ ಸಂಖ್ಯೆ 143ಕ್ಕೆ ಏರಿಕೆ
ನವದೆಹಲಿ: ಲೋಕಸಭೆಯಲ್ಲಿ ಅನುಚಿತವಾಗಿ ವರ್ತನೆ ಮಾಡಿದ ಕಾರಣಕ್ಕೆ ಪ್ರತಿಪಕ್ಷದ ಇಬ್ಬರು ಸಂಸದರನ್ನು ಅಮಾನತುಗೊಳಿಸಲಾಗಿದ್ದು, ಪ್ರಸಕ್ತ ಅಧಿವೇಶನದಲ್ಲಿ ಅಮಾನತುಗೊಂಡ ಸಂಸದರ ಸಂಖ್ಯೆ 143ಕ್ಕೆ ಏರಿಕೆಯಾಗಿದೆ. ಸಂಸದರ ಅಮಾನತು ವಿಚಾರದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಕಳೆದ ವಾರ ಸಂಸತ್ತಿನಲ್ಲಿ ಭದ್ರತಾ ಲೋಪ ಸಂಭವಿಸಿದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಹೇಳಿಕೆಗೆ ಒತ್ತಾಯಿಸಿ, ಪ್ರತಿಪಕ್ಷ ಸಂಸದರು ಕಲಾಪದಲ್ಲಿ ಭಾರಿ ಗದ್ದಲ, ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಲೋಕಸಭೆ ಸ್ಪೀಕರ್ ಮತ್ತು ರಾಜ್ಯಸಭೆಯ ಸಭಾಪತಿಗಳು ಸಂಸದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಮಂಡಿಸಿದ ನಿರ್ಣಯವನ್ನು ಸದನ ಅಂಗೀಕರಿಸಿದ ನಂತರ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಕೇರಳ ಕಾಂಗ್ರೆಸ್ನ ಥಾಮಸ್ ಚಾಜಿಕಡನ್ ಮತ್ತು ಸಿಪಿಐ(ಎಂ)ನ ಎ.ಎಂ. ಆರಿಫ್ ಅವರನ್ನು ಅಮಾನತುಗೊಳಿಸಿದರು. ಇವರು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಂಡಿದ್ದಾರೆ. ಲೋಕಸಭೆಯಲ್ಲಿ 142 ಪ್ರತಿಪಕ್ಷಗಳ ಸಂಸದರಿದ್ದು, ಅವರಲ್ಲಿ 97 ಮಂದಿ ಈಗ ಅಮಾನತುಗೊಂಡಿದ್ದಾರೆ. ಅಂದರೆ ಪ್ರತಿಪಕ್ಷ ಸಂಸದರಲ್ಲಿ ಶೇ. 68ಕ್ಕಿಂತ ಹೆಚ್ಚಿನವರು ಅಮಾನತಾಗಿದ್ದಾರೆ. ಚಳಿಗಾಲದ ಅಧಿವೇಶನದ ಅಂತ್ಯಕ್ಕೆ ಇನ್ನೆರಡು ದಿನಗಳು ಬಾಕಿ ಇವೆ.
ಸಂಸದರನ್ನು ಅಮಾನತುಗೊಳಿಸುವ ಮೂಲಕ ಸರ್ಕಾರವು ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಹಿಂದೆಂದೂ ಪ್ರತಿಪಕ್ಷದ ಇಷ್ಟು ಸಂಸದರನ್ನು ಅಮಾನತುಗೊಳಿಸಿರಲಿಲ್ಲ. ಕೇಂದ್ರ ಸರ್ಕಾರದ ದುರಹಂಕಾರವನ್ನು ವಿವರಿಸಲು ಪದಗಳಿಲ್ಲ. | ಸೋನಿಯಾ ಗಾಂಧಿ ಕಾಂಗ್ರೆಸ್ ನಾಯಕಿ