

ಭಾಗಲ್ಪುರ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ವಾಗ್ದಾಳಿ ನಡೆಸಿದ್ದಾರೆ. ನಿತೀಶ್ ಕುಮಾರ್ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ ಎಂದು ಹೇಳಿದ್ದಾರೆ.
ನಿತೀಶ್ ಕುಮಾರ್ ಇತ್ತೀಚೆಗೆ ನಡೆದ ಎನ್‌ಡಿಎ ಸಭೆಯಲ್ಲಿ ಪ್ರಧಾನಿ ಮೋದಿಯವರ ಕಾಲಿಗೆ ನಮಸ್ಕರಿಸಲು ಯತ್ನಿಸಿದ್ದು, ಇದಕ್ಕೆ ಪ್ರಶಾಂತ್ ಪ್ರತಿಕ್ರಿಯಿಸಿದ್ದು, ನಿತೀಶ್ ಕುಮಾರ್ ಅವರಿಗೆ ಅಧಿಕಾರ ಮತ್ತು ವೈಯಕ್ತಿಕ ಹಿತಾಸಕ್ತಿ ಮುಖ್ಯ. ಈ ಮೂಲಕ ನಿತೀಶ್ ರಾಜ್ಯಕ್ಕೆ ಕಳಂಕ ತಂದಿದ್ದಾರೆ ಎಂದು ಭಾಗಲ್ಪುರದಲ್ಲಿ ನಡೆದ ರ‍್ಯಾಲಿ ಯಲ್ಲಿ ಟೀಕಿಸಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಲ ಕಡಿಮೆಯಾಗಿದೆ. ಅಧಿಕಾರ ಹಿಡಿಯಲು ಅದು ಮಿತ್ರಪಕ್ಷಗಳ ಮೇಲೆ ಅವಲಂಬಿತವಾಗುವಂತಾಗಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ತೆಲುಗು ದೇಶಂನ 16, ಜೆಡಿಯುನ 12 ಎಂಪಿ ಸ್ಥಾನಗಳು ಮೋದಿಯವರಿಗೆ ಅವಶ್ಯಕತೆ ಇದೆ. ಎಂಪಿ ಸೀಟುಗಳಿಂದ ಬಲಿಷ್ಠರಾಗಿರುವ ನಿತೀಶ್ ಕುಮಾರ್ ಅವರು ಮೋದಿಯವರ ಕಾಲಿಗೆ ನಮಸ್ಕರಿಸುತ್ತಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಅವರು ರಾಜ್ಯದ ಹಿತಾಸಕ್ತಿಯೊಂದಿಗೆ ಹೋಗುತ್ತಿಲ್ಲ. ಅಧಿಕಾರದಲ್ಲಿ ಉಳಿಯುವುದು ಮುಖ್ಯ ಎಂದು ಪರಿಗಣಿಸಿದಂತಿದೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಅವರಿಗೆ ಬಿಜೆಪಿ ಬೆಂಬಲ ಬೇಕಾಗಿದೆ. ಹೀಗಾಗಿ ಪ್ರಧಾನಿ ಮೋದಿಯವರ ಕಾಲಿಗೆ ಬೀಳಲು ಮುಂದಾಗಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಪ್ರಶಾಂತ್ ಕಿಶೋರ್ ಮೊದಲ ಬಾರಿಗೆ ಬಿಜೆಪಿಗೆ ರಾಜಕೀಯ ತಂತ್ರಗಾರರಾಗಿ ಕೆಲಸ ಮಾಡಿದ್ದು ಗೊತ್ತೇ ಇದೆ. 2014ರಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪಿಕೆ ಶ್ರಮಿಸಿದ್ದರು. ಸೋಷಿಯಲ್ ಮೀಡಿಯಾಗಳು ಮೋದಿಗೆ ಹೈಪ್ ತಂದವು. ಆ ನಂತರ ಪ್ರಶಾಂತ್ ಕಿಶೋರ್ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ತಂತ್ರಗಾರರಾಗಿ ಕೆಲಸ ಮಾಡಿದರು. ಆ ಸಮಯದಲ್ಲಿ ವರ್ಕ್ ಔಟ್ ಆಗಲಿಲ್ಲ. ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಎಪಿಯಲ್ಲಿ ಜಗನ್ ಮೋಹನ್ ರೆಡ್ಡಿಗಾಗಿ ಪಿಕೆ ಕೆಲಸ ಮಾಡಿದ್ದಾರೆ.