ನ.11ರಂದು ನಿರ್ಮಲ ತುಂಗಾಭದ್ರಾ ಅಭಿಯಾನ

byr
ತುಂಗಾ, ಶಿವಮೊಗ್ಗ, ನದಿ, ಬಿವೈಆರ್
Published on

ಶಿವಮೊಗ್ಗ: ನಿರ್ಮಲ ತುಂಗಭದ್ರಾ ಅಭಿಯಾನ ವಿಶೇಷ ಪ್ರೇರಣೆ ನೀಡುವ ಕಾರ್ಯಕ್ರಮ. ಸ್ವಯಂಪ್ರೇರಿತವಾಗಿ ಇದರಲ್ಲಿ ಭಾಗವಹಿಸುವ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಮುಂದಿನ ತಿಂಗಳು ಅಭಿಯಾನ ಆರಂಭವಾಗುವ ಹಿನ್ನೆಲೆಯಲ್ಲಿ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕು. ತುಂಗಾ ಮತ್ತು ಭದ್ರಾ ಉಳಿವಿಗೆ ಎಲ್ಲರೂ ಕೈ ಜೋಡಿಸುತ್ತಿದ್ದಾರೆ. ಇದೊಂದು ಐತಿಹಾಸಿಕ ಪಾದಯಾತ್ರೆ ಆಗಲಿದೆ. ಇದು ಪಕ್ಷಾತೀತವಾಗಿ ನಡೆಯುತ್ತಿದೆ ಎಂದರು.

ಜಿಪಂ ಸಿಇಒ ಎನ್.ಹೇಮಂತ್ ಮಾತನಾಡಿ, ಜಿಲ್ಲೆಯಲ್ಲಿ ಎರಡು ತಾಲೂಕಿನ ಮೂಲಕ ಅಭಿಯಾನ ಸಾಗಲಿದೆ. ನ.10 ಹಾಗೂ 11ರಂದು ಶಿವಮೊಗ್ಗ ನಗರದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲು ವ್ಯವಸ್ಥೆ ಮಾಡಲಾಗುವುದು. ಡಿಡಿಪಿಯು, ಡಿಡಿಪಿಐ ಜತೆ ಮಾತನಾಡಿ ವಿದ್ಯಾರ್ಥಿಗಳನ್ನು ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನ.11ರಂದು ಪಾದಯಾತ್ರೆಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಕಷ್ಟವಾಗಬಹುದು. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಪಿಯುಸಿ ವಿದ್ಯಾರ್ಥಿಗಳಿಗೆ ನ.6ರಂದು ಪರೀಕ್ಷೆ ಮುಗಿಯಲಿದೆ. ಅವರು ಇದರಲ್ಲಿ ಭಾಗವಹಿಸುತ್ತಾರೆಯೇ ಎಂಬುದನ್ನು ತಿಳಿದುಕೊಳ್ಳುತ್ತೇನೆ. 4 ಅಥವಾ 5ರಂದು ಎಲ್ಲ ಇಲಾಖೆ ಅಧಿಕಾರಿಗಳ ಸಭೆ ಕರೆದು ಯಾವ ರೀತಿ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಲಾಗುವುದು. ಅಭಿಯಾನದ ಪ್ರಮುಖರು ಶಿವಮೊಗ್ಗ ನಗರದಲ್ಲಿ ಎರಡು ದಿನಗಳ ಕಾರ್ಯಕ್ರಮಗಳ ಪಟ್ಟಿ ನೀಡಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ತುಂಗಾ ಅಭಿಯಾನಕ್ಕೆ ಶಿವಮೊಗ್ಗದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ನ.10ರಂದು ಕಾಲೇಜು ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿ ಭವಿಷ್ಯದ ಯೋಜನೆ ರೂಪಿಸಬೇಕು. ಅಂದು ಸಂಜೆ ನಗರಪಾಲಿಕೆಯಿಂದ ತುಂಗಾರತಿ ನಡೆಸಬೇಕು. 11ರಂದು ಸಿದ್ಧಗಂಗಾ ಶ್ರೀಗಳು ಹಾಗೂ ನಟ, ಸಾಮಾಜಿಕ ಕಾರ್ಯಕರ್ತ ನಾನಾ ಪಾಟೇಕರ್ ಆಗಮಿಸುವ ನಿರೀಕ್ಷೆಯಿದೆ. ಅಂದು ಬೆಳಗ್ಗೆ ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿ ದೊಡ್ಡ ಸಭೆ ನಡೆಸಬೇಕು. ಎನ್‌ಎಸ್‌ಎಸ್, ಎನ್‌ಸಿಸಿ, ವಿವಿಧ ಸಂಘ ಸಂಸ್ಥೆಗಳನ್ನು ಇದರಲ್ಲಿ ಸೇರಿಸಿ ಕಾರ್ಯಕ್ರಮ ಯಶಸ್ವಿ ಮಾಡಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ, ನಿರ್ಮಲ ತುಂಗಭದ್ರಾ ಅಭಿಯಾನದ ಅಧ್ಯಕ್ಷ ಪ್ರೊ. ಬಿ.ಎಂ.ಕುಮಾರಸ್ವಾಮಿ, ಸಂಚಾಲಕ ಎಂ.ಶಂಕರ್, ಪರ್ಯಾವರಣ ಟ್ರಸ್ಟ್‌ನ ಪ್ರಮುಖರಾದ ಗಿರೀಶ್ ಪಟೇಲ್, ಶಿವಮೊಗ್ಗ ಹಾಗೂ ತೀರ್ಥಹಳ್ಳಿ ತಾಪಂ ಇಒಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net