ಸಣ್ಣ ಉದ್ದಿಮೆಗಳು ನಿರಾಳ: ರಿಟರ್ನ್ಸ್ ಸಲ್ಲಿಕೆ ವಿಳಂಬದ ಜಿಎಸ್​ಟಿ ಬಡ್ಡಿ ಅರ್ಧದಷ್ಟು ಕಡಿತ

GST
Published on

ನವದೆಹಲಿ: ಆರ್ಥಿಕತೆಯ ಮೇಲೆ ಕವಿದಿರುವ ಕರೊನಾ ಕಾಮೋಡವನ್ನು ಸರಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮುಂದುವರಿಸಿರುವಂತೆಯೇ ಶುಕ್ರವಾರ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿಯ 40ನೇ ಸಭೆಯಲ್ಲಿ ಸಣ್ಣ ತೆರಿಗೆದಾರರಿಗೆ ಅನುಕೂಲವಾದ ಮಹತ್ವದ ನಿರ್ಧಾರದ ಸಹಿತ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ವಿವಿಧ ರಾಜ್ಯಗಳ ಪ್ರತಿನಿಧಿಗಳೂ ಪಾಲ್ಗೊಂಡಿದ್ದರು. ಐದು ಕೋಟಿ ರೂಪಾಯಿಯಷ್ಟು ವಾರ್ಷಿಕ ವಹಿವಾಟು ಹೊಂದಿರುವ ಸಣ್ಣ ತೆರಿಗೆದಾರರು ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್​ನ ಜಿಎಸ್​ಟಿ ವಿವರ (ರಿಟರ್ನ್ಸ್) ವಿಳಂಬ ಸಲ್ಲಿಸುವ ವೇಳೆ ವಿಧಿಸುವ ಬಡ್ಡಿಯನ್ನು ಶೇ.18ರಿಂದ ಶೇ.9ಕ್ಕೆ ಕಡಿತ ಗೊಳಿಸಲಾಗಿದೆ. ಆದರೆ ಸೆ.30ರ ಒಳಗೆ ರಿಟರ್ನ್ಸ್ ಸಲ್ಲಿಸಬೇಕೆಂದು ಮಂಡಳಿ ಷರತ್ತು ವಿಧಿಸಿದೆ.

ಗಡುವು ವಿಸ್ತರಣೆ: ಮೇ, ಜೂನ್ ಮತ್ತು ಜುಲೈ ತಿಂಗಳ ರಿಟರ್ನ್ಸ್ ಸಲ್ಲಿಕೆ ಗಡುವನ್ನು ಈ ವರ್ಷ ಸೆಪ್ಟೆಂಬರ್​ವರೆಗೆ ವಿಸ್ತರಿಸಲಾಗಿದೆ. ಅದಕ್ಕೆ ಯಾವುದೇ ಬಡ್ಡಿ ಅಥವಾ ವಿಳಂಬ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಸಭೆಯ ನಂತರ ನಿರ್ಮಲಾ ಸುದ್ದಿಗಾರರಿಗೆ ತಿಳಿಸಿದರು. ಜಿಎಸ್​ಟಿ ಸಂಗ್ರಹದ ಮೇಲೆ ಕೋವಿಡ್-19 ಸಾಂಕ್ರಾಮಿಕತೆ ಬೀರಿರುವ ಪ್ರಭಾವವನ್ನು ಸಭೆಯಲ್ಲಿ ವಿವರವಾಗಿ ರ್ಚಚಿಸಲಾಯಿತು. ಪಾನ್ ಮಸಾಲಾ ಮೇಲೆ ತೆರಿಗೆ ವಿಧಿಸುವ ವಿಚಾರವನ್ನು ಮಂಡಳಿಯ ಮುಂದಿನ ಸಭೆ ರ್ಚಚಿಸಲಿದೆ ಎಂದು ಸಚಿವೆ ತಿಳಿಸಿದರು. ಎರಡು ತಿಂಗಳ ಲಾಕ್​ಡೌನ್ ಅವಧಿಯಲ್ಲಿ ಶೇ. 45ರ ಆಸುಪಾಸಿನಲ್ಲಿ ಆದಾಯ ಸಂಗ್ರಹವಾಗಿದೆ. ಇದನ್ನು ರಾಜ್ಯಗಳು ಅರ್ಥ ಮಾಡಿಕೊಳ್ಳುತ್ತವೆ. ಹೀಗಾಗಿ ಪ್ರತಿ ತಿಂಗಳು ತಮಗೆ ಎಷ್ಟು ಹಣ ಸಿಗುತ್ತದೆನ್ನುವುದು ರಾಜ್ಯಗಳಿಗೆ ಗೊತ್ತಿದೆ ಎಂದು ಹಣಕಾಸು ಹಾಗೂ ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಹೇಳಿದರು. ರಿಟರ್ನ್ಸ್ ಸಲ್ಲಿಕೆ ಅವಧಿಯನ್ನು ವಿಸ್ತರಿಸಿರುವುದರಿಂದ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಸಂಗ್ರಹವಾಗುವ ಹಣದ ನಿಜವಾದ ಚಿತ್ರಣ ಕೊನೆಯ ದಿನಾಂಕದ ನಂತರವಷ್ಟೇ ತಿಳಿಯಲಿದೆ ಎಂದರು.

ಕಡಿಮೆ ಜಿಎಸ್​ಟಿ ಮೊತ್ತ ಸಂಗ್ರಹವಾಗಿರುವುದರಿಂದ ಏಪ್ರಿಲ್ ಮತ್ತು ಮೇ ತಿಂಗಳ ಅಂಕಿ-ಸಂಖ್ಯೆಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ. ಸಾಮಾನ್ಯವಾಗಿ ಒಂದು ನಿರ್ದಿಷ್ಟ ತಿಂಗಳ ಜಿಎಸ್​ಟಿ ಸಂಗ್ರಹವನ್ನು ಮುಂದಿನ ತಿಂಗಳ ಮೊದಲ ದಿನದಂದೇ ಪ್ರಕಟಿಸಲಾಗುತ್ತದೆ.

ಜುಲೈನಲ್ಲಿ ಏಕ ಅಜೆಂಡಾ ಸಭೆ

ರಾಜ್ಯಗಳಿಗೆ ನೀಡಬೇಕಾದ ಜಿಎಸ್​ಟಿ ಪರಿಹಾರದ ವಿಷಯದ ಬಗ್ಗೆಯಷ್ಟೇ ರ್ಚಚಿಸುವ ಏಕ ಕಾರ್ಯಸೂಚಿ ಸಭೆಯನ್ನು ಜುಲೈನಲ್ಲಿ ನಡೆಸಲಾಗುವುದು ಎಂದು ನಿರ್ಮಲಾ ಸ್ಪಷ್ಟ ಪಡಿಸಿದರು.

ಅಸ್ತವ್ಯಸ್ತಗೊಂಡ ಸರಬರಾಜಿಗೆ ಸಂಬಂಧಿಸಿದ ಜಿಎಸ್​ಟಿಆರ್-3ಬಿ ಫಾಮ್ರ್ ಸಲ್ಲಿಸುವವರಿಗೆ ವಿಳಂಬ ಶುಲ್ಕ ಮತ್ತು ಬಡ್ಡಿ ಮನ್ನಾ ಮಾಡಿರುವುದರಿಂದ ಬಹುತೇಕ ಸಣ್ಣ ತೆರಿಗೆದಾರರಿಗೆ ಲಾಭವಾಗುತ್ತದೆ. -ಕೇತನ್ ಕೊಠಾರಿ, ಅರ್​ವೋಗ್ ನಿರ್ದೇಶಕ

ವಿಳಂಬ ಶುಲ್ಕ ವಿಧಿಸಲ್ಲ

ಶೂನ್ಯ (ನಿಲ್) ಜಿಎಸ್​ಟಿ ಹೊಂದಿರುವ ನೋಂದಾಯಿತ ಸಂಸ್ಥೆಗಳು 2017ರಿಂದ 2020ರ ನಡುವೆ ಜಿಎಸ್​ಟಿ ರಿಟರ್ನ್ಸ್ (ಜಿಎಸ್​ಟಿಆರ್-3ಬಿ) ತಡವಾಗಿ ಸಲ್ಲಿಸಿದ್ದರೆ ಅಂಥ ಕಂಪನಿಗಳಿಗೆ ವಿಳಂಬ ಶುಲ್ಕ ವಿಧಿಸುವುದಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಪ್ರಕಟಿಸಿದರು. ಅವುಗಳನ್ನು ಬಿಟ್ಟು ಇತರರು ಮಾಸಿಕ ಮಾರಾಟ ವಿವರವನ್ನು ವಿಳಂಬವಾಗಿ ಸಲ್ಲಿಸಿದ್ದರೆ ಅಂಥ ಕಂಪನಿಗಳಿಗೆ 2017 ಜುಲೈನಿಂದ 2020 ಜನವರಿ ವರೆಗೆ ವಿಧಿಸುವ ವಿಳಂಬ ಶುಲ್ಕವನ್ನು ಗರಿಷ್ಠ 500 ರೂಪಾಯಿಗೆ ಇಳಿಸಲಾಗಿದೆ ಎಂದು ಹೇಳಿದರು.

ಪರಿಹಾರಕ್ಕೆ ರಾಜ್ಯದ ಮನವಿ

ಬೆಂಗಳೂರು: ಮಾರ್ಚ್​ನಿಂದ ಮೇವರೆಗೆ 10208 ಕೋಟಿ ರೂ. ಜಿಎಸ್​ಟಿ ಪರಿಹಾರ ಕರ್ನಾಟಕಕ್ಕೆ ಬರಬೇಕಿದ್ದು, ಈ ಪೈಕಿ ಕನಿಷ್ಠ 1460 ಕೋಟಿ ರೂ.ಗಳನ್ನಾದರೂ ಕೂಡಲೇ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ. ಶುಕ್ರವಾರ ನಡೆದ ಜಿಎಸ್​ಟಿ ಪರಿಷತ್ ಸಭೆಯಲ್ಲಿ ಭಾಗವಹಿಸಿದ್ದ ಗೃಹ ಸಚಿವ ಹಾಗೂ ಪರಿಷತ್ ಸದಸ್ಯ ಬಸವರಾಜ ಬೊಮ್ಮಾಯಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯದ ಬೇಡಿಕೆಗಳನ್ನು ಸಲ್ಲಿಸಿದರು. ಜತೆಗೆ ಕೇಂದ್ರ ಸರ್ಕಾರ ಡಿಸೆಂಬರ್​ನಿಂದ 2020ರ ಫೆಬ್ರವರಿ ತನಕ ಬಾಕಿ ಇದ್ದ 4314 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಕರ್ನಾಟಕದ ಬೇಡಿಕೆಗಳು

* 5 ಕೋಟಿ ರೂ.ಗಿಂತ ಕಡಿಮೆ ವ್ಯವಹಾರಗಳಿಗೆ ಸಂಬಂಧಿಸಿದಂತೆ ರಿಟರ್ನ್ಸ್ ದಾಖಲಿಸಲು ಜೂನ್ ಅಂತ್ಯದವರೆವಿಗೂ ಕಾಲಾವಕಾಶ ವಿಸ್ತರಿಸಬೇಕು

* 2020ರ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್​ಗೆ ಸಂಬಂಧಪಟ್ಟಂತೆ ಶೇ.18 ಇದ್ದ ಬಡ್ಡಿ ದರವನ್ನು ಶೇ.9ಕ್ಕೆ ಮಿತಿಗೊಳಿಸಿ ಬಡ್ಡಿ ವಿಧಿಸಬೇಕು

* 2020ರ ಮೇ, ಜೂನ್ ಮತ್ತು ಜುಲೈಗೆ ಸಂಬಂಧಪಟ್ಟಂತೆ ರಿಟರ್ನ್ಸ್ ದಾಖಲಿಸುವ ಕಾಲಾವಕಾಶವನ್ನು ವಿಸ್ತರಿಸಬೇಕು

* ಕರೊನಾದಿಂದಾಗಿ ಮಾರ್ಚ್​ನಿಂದ ಜುಲೈ ಅವಧಿಯಲ್ಲಿ ಉಂಟಾಗಿರುವ ರಾಜಸ್ವ ನಷ್ಟ ಮತ್ತು ಪರಿಹಾರದ ಅಂತರವನ್ನು ಸರಿಪಡಿಸಬೇಕು

ವ್ಯಾಪಾರಿಗಳಿಗೆ ಲಾಭ

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್​ಎಂಇ) ಸೇರಿದಂತೆ ಬಹುತೇಕ ಜಿಎಸ್​ಟಿ ತೆರಿಗೆದಾರರಿಗೆ ಶುಕ್ರವಾರದ ಮಂಡಳಿ ನಿರ್ಣಯ ಲಾಭದಾಯಕವಾಗಲಿದೆ. ಇದೊಂದು ಸ್ವಾಗತಾರ್ಹ ನಡೆ ಎಂದು ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬಡ್ಡಿ ದರವನ್ನು ಶೇ.18ರಿಂದ ಶೇ.9ಕ್ಕೆ ಇಳಿಸಿರುವುದರಿಂದ ಲಕ್ಷಾಂತರ ಸಣ್ಣ ಉದ್ದಿಮೆ ವ್ಯವಹಾರಸ್ಥರಿಗೆ ಅನುಕೂಲವಾಗಲಿದೆ.

ಲಾಭ ಹೇಗೆ?

  • ಲಾಕ್​ಡೌನ್ ಡೌನ್ ಅವಧಿಯಲ್ಲಿ ಬಹುತೇಕ ಉದ್ದಿಮೆಗಳು ಹೆಚ್ಚಿನ ಉತ್ಪಾದನೆ ಗುರಿ ಮುಟ್ಟಲಾಗದೆ ನಷ್ಟದಲ್ಲಿದ್ದವು
  • ಕುಟುಂಬ ಹೊಣೆಗಾರಿಕೆ, ಕಟ್ಟಡ ಬಾಡಿಗೆ ಜತೆಗೆ ಸರ್ಕಾರಕ್ಕೆ ತೆರಿಗೆ ಕಟ್ಟುವ ದೊಡ್ಡ ಹೊರೆ ಇತ್ತು
  • ಇದೀಗ ಬಡ್ಡಿ ದರ ಕಡಿತಗೊಂಡಿದ್ದರಿಂದ ಒಟ್ಟು ಹೊರೆಯಲ್ಲಿ ಅರ್ಧ ತಗ್ಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net