

ನವದೆಹಲಿ: ಮೂರನೇ ಡೆತ್ ವಾರಂಟ್ ಪ್ರಕಾರ ಮಾ. 3ರಂದು ನಿಗದಿಯಾಗಿರುವ ನಿರ್ಭಯಾ ಅತ್ಯಾಚಾರ ಅಪರಾಧಿಗಳ ಗಲ್ಲುಶಿಕ್ಷೆ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ನಿರ್ಭಯಾ ಹಂತಕರನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಲು ಅನುಮತಿ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಮಾ.5 ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಈಗಾಗಲೇ ಮಾ.3 ರಂದು ಅಪರಾಧಿಗಳನ್ನು ಗಲ್ಲಿಗೇರಿಸಲು ಹೊರಡಿಸಿರುವ ವಾರಂಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡುವ ಸಾಧ್ಯತೆ ಹೆಚ್ಚಾಗಿದೆ.
ನಿರ್ಭಯಾ ಅಪರಾಧಿಗಳು ತಮ್ಮ ಕಾನೂನು ಅವಕಾಶಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಯಾರು ತಮ್ಮ ಎಲ್ಲ ಕಾನೂನು ಅವಕಾಶಗಳನ್ನು ಮುಗಿಸುತ್ತಾರೋ ಅವರನ್ನು ಸರದಿಯಂತೆ ಗಲ್ಲಿಗೇರಿಸಲು ಅನುಮತಿಸಬೇಕು ಎಂದು ಕೇಂದ್ರದ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ವಾದಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ಪೀಠ, ಮುಂದಿನ ವಿಚಾರಣೆಯನ್ನು ಮಾರ್ಚ್ 5ರ ಮಧ್ಯಾಹ್ನ 3 ಗಂಟೆಗೆ ನಿಗದಿಪಡಿಸಿದೆ. ಕೇಂದ್ರದ ಅರ್ಜಿ ವಿಚಾರಣೆ ಕಳೆದ ವಾರವೇ ನಡೆಯಬೇಕಾಗಿತ್ತಾದರೂ ನ್ಯಾ. ಭಾನುಮತಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ವಿಳಂಬವಾಗಿದೆ. ಪ್ರತ್ಯೇಕವಾಗಿ ಮರಣದಂಡನೆ ಜಾರಿ ಕುರಿತು ಈ ಹಿಂದೆ ದೆಹಲಿ ಹೈಕೋರ್ಟ್ಗೆ ಕೇಂದ್ರ ಅರ್ಜಿ ಸಲ್ಲಿಸಿತ್ತು. ಆದರೆ ಎಲ್ಲ ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೇರಿಸಲಾಗುತ್ತದೆ. ಓರ್ವ ಅಪರಾಧಿಯ ಕ್ಷಮಾದಾನ ಅರ್ಜಿ ಅವಕಾಶ ಬಾಕಿ ಇರುವಾಗ ಉಳಿದವರನ್ನು ಗಲ್ಲಿಗೇರಿಸಲು ಬರುವುದಿಲ್ಲ ಎಂದು ಕೋರ್ಟ್ ಹೇಳಿತ್ತು.
ಅಪರಾಧಿಗಳ ಹೊಸ ನಾಟಕ
ಗಲ್ಲುಶಿಕ್ಷೆ ಜಾರಿ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಿರ್ಭಯಾ ಹಂತಕರು ಹೊಸ ನಾಟಕಗಳನ್ನು ಶುರು ಮಾಡಿದ್ದಾರೆ. ತಮ್ಮ ಮೇಲೆ ತಾವೇ ಹಲ್ಲೆ ನಡೆಸಿಕೊಳ್ಳುವ ಬೆದರಿಕೆ ಹಾಕುತ್ತಿದ್ದು, ಊಟವನ್ನೂ ತಿರಸ್ಕರಿಸುತ್ತಿದ್ದಾರೆ. ಒಮ್ಮೆ ಕೋಪದಲ್ಲಿರುವ ಅವರು ಮತ್ತೊಮ್ಮೆ ಸಂಪೂರ್ಣ ಶಾಂತವಾಗಿರುತ್ತಾರೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ವರ ಕೋಣೆಗಳು ಸಮೀಪ ಇರುವುದರಿಂದ ಜೋರಾಗಿ ಕೂಗಿ ಕೂಗಿ ಒಬ್ಬರಿಗೊಬ್ಬರು ಮಾತನಾಡುತ್ತಾರೆ. ಸದ್ಯ ಪ್ರತಿದಿನ ಎರಡು ಬಾರಿ ಅಪರಾಧಿಗಳ ಜತೆ ವೈದ್ಯರು ಮಾತುಕತೆ ನಡೆಸುವ ಮೂಲಕ ಅವರ ಮಾನಸಿಕ ಸ್ಥಿತಿ ಬಗ್ಗೆ ನಿಗಾವಹಿಸಿದ್ದಾರೆ. ಇವರ ಕೋಣೆಗಳ ಸಮೀಪವೇ ಗಲ್ಲುಶಿಕ್ಷೆ ಜಾರಿ ಮಾಡುವ ಸ್ಥಳವಿದೆ ಎಂದು ಬೆದರಿಸಿದ್ದಾಗಿನಿಂದ ಅವರು ಕೋಪದಲ್ಲಿ ವರ್ತಿಸುತ್ತಿದ್ದಾರೆ. ಈ ಹಿನ್ನೆಲೆ ಜೈಲಿನ ಯಾವ ಸಿಬ್ಬಂದಿಯೂ ಗಲ್ಲುಶಿಕ್ಷೆ ಬಗ್ಗೆ ಅಪರಾಧಿಗಳ ಜತೆ ರ್ಚಚಿಸಬಾರದು ಎಂದು ಸೂಚನೆ ನೀಡಲಾಗಿದೆ.