

ನವದೆಹಲಿ: ನಿರ್ಭಯಾ ಅತ್ಯಾಚಾರ ಅಪರಾಧಿಗಳ ಗಲ್ಲು ಶಿಕ್ಷೆ ಮತ್ತೊಮ್ಮೆ ಮುಂದಕ್ಕೆ ಹೋಗಿದೆ. ಈ ಹಿಂದೆ ದೆಹಲಿ ಕೋರ್ಟ್ ನೀಡಿದ್ದ ಡೆತ್ ವಾರೆಂಟ್ ಅನ್ವಯ ಮಾರ್ಚ್ 3(ನಾಳೆ)ರಂದು ಮುಂಜಾನೆ 6ಗಂಟೆಗೆ ನಾಲ್ವರು ಅಪರಾಧಿಗಳು ಗಲ್ಲಿಗೇರಬೇಕಿತ್ತು. ಆದರೆ ಮತ್ತೊಮ್ಮೆ ದೆಹಲಿ ಪಟಿಯಾಲಾ ನ್ಯಾಯಾಲಯ ದಿನಾಂಕವನ್ನು ಮುಂದೂಡಿದೆ.
ಗಲ್ಲಿಗೇರುವ ದಿನ ಹತ್ತಿರ ಬರುತ್ತಿದ್ದಂತೆ ಅಪರಾಧಿ ಪವನ್ ಕುಮಾರ್ ರಾಷ್ಟ್ರಪತಿಗೆ ದಯಾ ಅರ್ಜಿ ಸಲ್ಲಿಸಿದ್ದ. ಹಾಗೇ ತಾನು ದಯಾ ಅರ್ಜಿ ಸಲ್ಲಿಸಿದ್ದು, ಅದು ಇತ್ಯರ್ಥ ಆಗುವವರೆಗೆ ಮರಣದಂಡನೆಗೆ ತಡೆ ನೀಡಬೇಕು ಎಂದು ದೆಹಲಿ ಪಟಿಯಾಲಾ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಆ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಮರಣದಂಡನೆಯನ್ನು ಮುಂದೂಡಿ ಇಂದು ಆದೇಶ ನೀಡಿದ್ದಾರೆ.
ದೆಹಲಿ ಪಟಿಯಾಲಾ ಹೌಸ್ ಕೋರ್ಟ್ನ ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರು ಪವನ್ ಕುಮಾರ್ ಅರ್ಜಿ ವಿಚಾರಣೆಯನ್ನು ಮುಂದೂಡುವ ಜತೆಗೆ, ಗಲ್ಲಿಗೇರಿಸುವ ದಿನವನ್ನೂ ಮುಂದೂಡಿದ್ದಾರೆ.
ಪವನ್ ಕುಮಾರ್ ಮೊದಲು ಸುಪ್ರಿಂಕೋರ್ಟ್ಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದ, ಅದು ತಿರಸ್ಕೃತವಾಗಿತ್ತು. ರಾಷ್ಟ್ರಪತಿಗೆ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯೂ ತಿರಸ್ಕೃತಗೊಂಡಿತ್ತು. ಮಾರ್ಚ್ 3ರಂದು ಬೆಳಗ್ಗೆ ನಿಗದಿಯಾಗಿರುವ ಗಲ್ಲುಶಿಕ್ಷೆಗೆ ತಡೆ ನೀಡಬೇಕು ಎಂದು ಅಪರಾಧಿಗಳಾದ ಅಕ್ಷಯ್ ಠಾಕೂರ್, ಪವನ್ ಗುಪ್ತಾ, ಮುಕೇಶ್ ಸಿಂಗ್ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ಇಂದು ಬೆಳಗ್ಗೆಯಷ್ಟೇ ವಜಾಗೊಳಿಸಲಾಗಿತ್ತು. ಆದರೆ ಈಗ ಮತ್ತೆ ದೆಹಲಿ ಪಟಿಯಾಲಾ ಕೋರ್ಟ್ ಗಲ್ಲುಶಿಕ್ಷೆಗೆ ತಡೆ ನೀಡಿದೆ.(ಏಜೆನ್ಸೀಸ್)