ನಿರ್ಭಯಾ ಪ್ರಕರಣ: ಗಲ್ಲುಶಿಕ್ಷೆ ತಡೆಕೋರಿ ಅಪರಾಧಿ ಅಕ್ಷಯ್​ ಸಿಂಗ್​ನಿಂದ ದೆಹಲಿ ಕೋರ್ಟ್​ಗೆ ಅರ್ಜಿ ಸಲ್ಲಿಕೆ

Akshay Singh
Published on

ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳ ಮರಣದಂಡನೆಗೆ ಎರಡು ದಿನವಷ್ಟೇ ಬಾಕಿ ಇದೆ. ಹೀಗಿರುವಾಗ ಗಲ್ಲುಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಾಲ್ವರು ಅಪರಾಧಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಅಪರಾಧಿಯೊಬ್ಬ ಗಲ್ಲುಶಿಕ್ಷೆಗೆ ತಡೆಕೋರಿ ದೆಹಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ.

ಫೆ. 1ರಂದು ನಡೆಯಲಿರುವ ಗಲ್ಲುಶಿಕ್ಷೆಗೆ ತಡೆ ನೀಡುವಂತೆ ಅಪರಾಧಿ ಅಕ್ಷಯ್​ ಸಿಂಗ್​ ಪಟಿಯಾಲ ನ್ಯಾಯಾಲಯಕ್ಕೆ ಗುರುವಾರ ಅರ್ಜಿ ಸಲ್ಲಿಸಿದ್ದಾನೆ. ಇನ್ನೊಂದೆಡೆ ಸುಪ್ರೀಂಕೋರ್ಟ್​,​ ಅಕ್ಷಯ್​ ಸಿಂಗ್​ ಸಲ್ಲಿಸಿರುವ ಕ್ಯುರೇಟಿವ್​ ಅರ್ಜಿ ವಿಚಾರಣೆ ನಡೆಸಿ ಇಂದೇ ತೀರ್ಪು ಪ್ರಕಟಿಸಲಿದೆ.

ಕಳೆದ ರಾತ್ರಿ ಮತ್ತೊಬ್ಬ ಅಪರಾಧಿ ವಿನಯ್​ ಶರ್ಮಾ ರಾಷ್ಟ್ರಪತಿಗಳಿಗೆ ಕ್ಷಮಾಧಾನ ಅರ್ಜಿಯನ್ನು ಸಲ್ಲಿಸಿದ್ದಾನೆ. ವಿನಯ್​ ಜೈಲಿನಲ್ಲೇ ಅನೇಕ ಬಾರಿ ಸತ್ತಿದ್ದಾನೆ. ಹೀಗಾಗಿ ಆತನ ಕ್ಷಮಾಧಾನ ಅರ್ಜಿಯನ್ನು ಪರಿಗಣಿಸಿ ಎಂದು ವಿನಯ್​ ಪರ ವಕೀಲ ಅರ್ಜಿಯಲ್ಲಿ ವಾದಿಸಿದ್ದಾರೆ.

ಅಪರಾಧಿಗಳಾದ ಮುಕೇಶ್​ ಕುಮಾರ್​ ಸಿಂಗ್​, ಪವನ್​ ಕುಮಾರ್​ ಗುಪ್ತ, ವಿನಯ್​ ಕುಮಾರ್​ ಶರ್ಮ ಮತ್ತು ಅಕ್ಷಯ್​ ಕುಮಾರ್​ ಸಿಂಗ್​ಗೆ ಫೆ. 1ಕ್ಕೆ ಗಲ್ಲು ಶಿಕ್ಷೆ ನಿಗದಿಯಾಗಿದೆ.

23 ವರ್ಷದ ಪ್ಯಾರಾಮೆಡಿಕಲ್​ ವಿದ್ಯಾರ್ಥಿನಿಯನ್ನು ಡಿಸೆಂಬರ್​ 16, 2012ರಂದು ಬಾಲಾಪಾರಾಧಿ ಸೇರಿದಂತೆ ಒಟ್ಟು ಆರು ಮಂದಿ ಮೃಗೀಯವಾಗಿ ಅತ್ಯಾಚಾರವೆಸಗಿ, ಕೊಲೆಗೈದು ವಿಕೃತಿ ಮೆರೆದಿದ್ದರು.

ಒಟ್ಟು ಆರು ಅಪರಾಧಿಗಳಲ್ಲಿ ರಾಮ ಸಿಂಗ್​ ತಿಹಾರ್​ ಜೈಲಿನಲ್ಲೇ 2013 ಮಾರ್ಚ್​ನಲ್ಲಿ ಪಾಪಾಪ್ರಜ್ಞೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. ಮತ್ತೊಬ್ಬ ಬಾಲಾಪಾರಾಧಿಯನ್ನು ಅಪರಾಧ ನಡೆದ ಮೂರು ವರ್ಷಗಳ ಬಳಿಕ ಬಿಡುಗಡೆ ಮಾಡಲಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net