ನಿರ್ಭಯಾ ಹಂತಕನ ಅರ್ಜಿ ವಜಾ

delhi high court
Published on

ನವದೆಹಲಿ: ನಿರ್ಭಯಾ ಅತ್ಯಾಚಾರ ಘಟನೆ ನಡೆದಾಗ ತಾನು ದೆಹಲಿಯಲ್ಲಿ ಇರಲಿಲ್ಲ. ಹೀಗಾಗಿ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಿ ಎಂದು ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಮುಕೇಶ್ ಸಿಂಗ್ ಮಂಗಳವಾರ ಅರ್ಜಿ ಸಲ್ಲಿಸಿದ್ದು, ಇದನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದೆ.

ನಿರ್ಭಯಾ ಅತ್ಯಾಚಾರ ನಡೆದ 2012ರ ಡಿ.16ರಂದು ನಾನು ದೆಹಲಿಯಲ್ಲಿರಲಿಲ್ಲ. 17ರಂದು ರಾಜಸ್ಥಾನದಿಂದ ನನ್ನನ್ನು ಬಂಧಿಸಿ ದೆಹಲಿಗೆ ಕರೆತರಲಾಗಿತ್ತು ಎಂದು ಮುಕೇಶ್ ಸಿಂಗ್ ತನ್ನ ಅರ್ಜಿಯಲ್ಲಿ ತಿಳಿಸಿದ್ದ. ಜೈಲಿನಲ್ಲಿ ತನಗೆ ಹಿಂಸೆ ನೀಡಲಾಗಿತ್ತು ಎಂದು ಆರೋಪಿಸಿದ್ದ. ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಧಮೇಂದ್ರ ರಾಣಾ, ಅರ್ಜಿ ವಜಾಗೊಳಿಸಿದ್ದಾರೆ. ಈ ಮೂಲಕ ನಾಲ್ಕನೇ ಡೆತ್ ವಾರಂಟ್ ಪ್ರಕಾರ ನಾಲ್ವರೂ ಅಪರಾಧಿಗಳನ್ನು ಮಾ.20ರಂದು ಗಲ್ಲಿಗೇರಿಸುವುದು ಬಹುತೇಕ ಖಚಿತವಾಗಿದೆ.

ಆದಾಗ್ಯೂ ಅಪರಾಧಿಗಳು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲೂ ಅರ್ಜಿ ಸಲ್ಲಿಸಿದ್ದು, ಅವರ ಕುಟುಂಬಸ್ಥರೂ ಕೂಡ ಮರಣದಂಡನೆ ತಪ್ಪಿಸಲು ವಿವಿಧ ನೆಪಗಳನ್ನೊಡ್ಡಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ನಡುವೆ ಅಪರಾಧಿಗಳನ್ನು ಗಲ್ಲಿಗೇರಿಸಲು ನೇಮಕವಾಗಿರುವ ಹ್ಯಾಂಗ್​ವ್ಯಾನ್ ಪವನ್ ಜಲ್ಲಾದ್ ಮಂಗಳವಾರ ತಿಹಾರ್ ಜೈಲಿಗೆ ಬಂದಿದ್ದಾರೆ.

ಬುಧವಾರ ಅಪರಾಧಿಗಳ ತೂಕ ಹೊಂದಿರುವ ಡಮ್ಮಿಗಳನ್ನು ಗಲ್ಲಿಗೇರಿಸಿ ಪರೀಕ್ಷೆ ನಡೆಸಲಾಗುತ್ತದೆ. ಈ ಮಧ್ಯೆ, ಅಪರಾಧಿ ಅಕ್ಷಯ್ ಕುಮಾರ್​ನ ಪತ್ನಿ ಪುನಿತಾ ಕೌಟುಂಬಿಕ ನ್ಯಾಯಾಲಯವೊಂದರಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net