

Nipah Virus: ಕಳೆದ ವರ್ಷ ಬೆಂಬಿಡದೆ ಕಾಡಿದ್ದ ನಿಫಾ ವೈರಸ್ ಸೋಂಕು ಇದೀಗ ಮತ್ತೆ ತಲೆ ಎತ್ತಿದ್ದು, ಕೇರಳದಲ್ಲಿ ಎರಡು ನಿಫಾ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ಒಂದು ಮಲಪ್ಪುರಂ ಜಿಲ್ಲೆಯಲ್ಲಿ ಪತ್ತೆಯಾಗಿದ್ದರೆ, ಮತ್ತೊಂದು ಪಾಲಕ್ಕಾಡ್ ಜಿಲ್ಲೆಯಲ್ಲಿ ವರದಿಯಾಗಿದೆ. ವೈರಸ್ ಪ್ರಕರಣಗಳ ಬೆನ್ನಲ್ಲೇ ಮೂರು ಜಿಲ್ಲೆಗಳಲ್ಲಿ ಹೈಅಲರ್ಟ್ ಮಾಡಲಾಗಿದೆ.
ಮೂರು ನಿಫಾ ವೈರಸ್ ಪ್ರಕರಣಗಳು ಪತ್ತೆಯಾದ ಹಿನ್ನಲೆ ಕೋಝಿಕೋಡ್, ಮಲಪ್ಪುರಂ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಮಲಪ್ಪುರಂ ಮತ್ತು ಕೋಝಿಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ನಡೆಸಿದ ಪರೀಕ್ಷೆಗಳಿಂದ ಪ್ರಾಥಮಿಕ ದೃಢೀಕರಣ ಬಂದಿದೆ. ಅಂತಿಮ ದೃಢೀಕರಣಕ್ಕಾಗಿ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಪಾಲಕ್ಕಾಡ್, ಮಲಪ್ಪುರಂ ಮತ್ತು ಕೋಝಿಕ್ಕೋಡ್ ಜಿಲ್ಲಾಧಿಕಾರಿಗಳು ವೈರಸ್ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಆಯಾ ಇಲಾಖೆಗಳಿಗೆ ಆದೇಶಿಸಿದ್ದಾರೆ. ಪೀಡಿತ ಪ್ರದೇಶಗಳಲ್ಲಿ ಸಾರ್ವಜನಿಕ ಪ್ರಕಟಣೆಗಳು ಮತ್ತು ಜನರಲ್ಲಿ ಅರಿವು ಮೂಡಿಸುವ ಕೆಲಸಗಳನ್ನು ಚುರುಕುಗೊಳಿಸಲಾಗಿದೆ,(ಏಜೆನ್ಸೀಸ್).