

ಚಿಕ್ಕಮಗಳೂರು: ಕರ್ನಾಟಕ ಜಾನಪದ ಪರಿಷತ್‌ನಿಂದ ಅಜ್ಜಂಪುರ ತಾಲೂಕಿನ ಗಡಿಹಳ್ಳಿಯಲ್ಲಿ ಫೆ.10ರಂದು ತಾಲೂಕು ಮಟ್ಟದ ತೃತೀಯ ಜಾನಪದ ಸಮ್ಮೇಳನ ನಡೆಯಲಿದ್ದು, ಜಿಲ್ಲೆಯ ಹಿರಿಯ ರಂಗಕಲಾವಿದ ಟಿ.ನಿಂಗಪ್ಪ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಗಡಿಹಳ್ಳಿಯ ಗ್ರಾಪಂ ಕಚೇರಿಯಲ್ಲಿ ಹಿರಿಯ ವೀರಗಾಸೆ ಕಲಾವಿದ ಮಾಳೇನಹಳ್ಳಿ ಬಸಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಸಮ್ಮೇಳನದಲ್ಲಿ ಕಲಾವಿದರನ್ನು ಗೌರವಿಸುವುದು, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ, ಸಮ್ಮೇಳನದ ಯಶಸ್ಸಿಗೆ ವಿವಿಧ ಸಮಿತಿ ರಚಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಕಜಾಪ ಜಿಲ್ಲಾಧ್ಯಕ್ಷ ಜೆ.ಬಿ.ಸುರೇಶ್ ಮಾತನಾಡಿ, ಒಗಟು, ಗಾದೆ, ಹಾಡು ಮತ್ತು ನಾಟಕಗಳ ಮೂಲಕ ರಾಜ್ಯಾದ್ಯಂತ ಹೆಸರು ಮಾಡಿರುವ, ಅನೇಕ ಪ್ರಶಸ್ತಿಗಳಿಗೆ ಪಾತ್ರರಾಗಿರುವ ಟಿ.ನಿಂಗಪ್ಪ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಜಾನಪದ ಕಲಾತಂಡಗಳ ನಡುವೆ ವೈಭವದಿಂದ ನಡೆಸಲಾಗುವುದು. ಸಮ್ಮೇಳನದಲ್ಲಿ ವಿವಿಧ ಜಾನಪದ ಗೋಷ್ಠಿಗಳು ನಡೆಯಲಿವೆ. ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಜಾನಪದ ಪರಿಷತ್ತಿನ ಅಜ್ಜಂಪುರ ತಾಲೂಕು ಗೌರವಾಧ್ಯಕ್ಷ ಮರುಳಸಿದ್ದಪ್ಪ ಮಾತನಾಡಿ, ಸಮ್ಮೇಳನದಲ್ಲಿ ವಿವಿಧ ಜಾನಪದ ಪ್ರಾಕಾರಗಳ ಪ್ರದರ್ಶನ ಆಯೋಜಿಸಲಾಗುವುದು ಎಂದರು. ಸಭೆ ಉದ್ಘಾಟಿಸಿ ಮಾತನಾಡಿದ ಗ್ರಾಮದ ಮುಖಂಡ ಮಂಜಣ್ಣ, ಇಡೀ ಗ್ರಾಮ ಒಗ್ಗೂಡಿ ಸಮ್ಮೇಳನದ ಯಶಸ್ಸಿಗೆ ದುಡಿಯಬೇಕು ಎಂದು ಮನವಿ ಮಾಡಿದರು
ಹಿರಿಯ ಜಾನಪದ ಕಲಾವಿದೆ ಮುಗುಳಿ ಲಕ್ಷ್ಮೀದೇವಮ್ಮ, ಗ್ರಾಮಾಭಿವೃದ್ಧಿ ಸಮಿತಿ ಸದಸ್ಯ ಮಂಜಣ್ಣ, ಗ್ರಾಪಂ ಅಧ್ಯಕ್ಷ ತಿಮ್ಮಯ್ಯ, ಜಿ.ಎಸ್.ತಿಪ್ಪೇಶ್, ಕಾಂಗ್ರೆಸ್ ಮುಖಂಡ ನಿರಂಜನ್, ಚಿಕ್ಕನಲ್ಲೂರು ಜಯಣ್ಣ, ಶಿಕ್ಷಕ ಅಣ್ಣಯ್ಯ, ಯುವರಾಜ್, ಪರಮೇಶ್ವರಪ್ಪ ಸಭೆಯಲ್ಲಿ ಭಾಗಿಯಾಗಿದ್ದರು.