

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಸರ್ಕಾರಿ ಬಸ್ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವ ಶಕ್ತಿ ಯೋಜನೆಗೀಗ ವರ್ಷದ ಹರ್ಷ. ಕಳೆದ ವರ್ಷ ಜೂ. 11ರಂದು ಚಾಲನೆಗೊಂಡಿದ್ದ ಈ ಯೋಜನೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಇದು ಚುನಾವಣೆ ದೃಷ್ಟಿಯಿಂದ ಮಾಡಿದ ಯೋಜನೆಯಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಶಕ್ತಿ ಯೋಜನೆ ವರ್ಷಾಚರಣೆ ಹಿನ್ನೆಲೆಯಲ್ಲಿ ‘ವಿಜಯವಾಣಿ’ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳ ಮುಂದುವರಿಕೆ ಬಗ್ಗೆ ಪ್ರತಿಪಕ್ಷಗಳು ವ್ಯಕ್ತಪಡಿಸಿರುವ ಅನುಮಾನಕ್ಕೆ ಸ್ಪಷ್ಟನೆ ನೀಡಿದರು. ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆ ಮತ್ತಷ್ಟು ಶಕ್ತಿಶಾಲಿ ಯಾಗಿದೆ. ಯೋಜನೆಗೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿರು ವುದರಿಂದ ಯೋಜನೆ ಅಬಾಧಿತ. ಯಾವುದೇ ನಿರ್ಬಂಧಗಳೂ ಇಲ್ಲದೆ ಯೋಜನೆಯ ಉದ್ದೇಶ ಸಾಕಾರಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದರು.
2023ರಿಂದ 2028ರ ಅವಧಿ ಮಾತ್ರವಲ್ಲ ಮುಂದೆಯೂ ನಮ್ಮ ಸರ್ಕಾರವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು, ಮುಂದಿನ ಅವಧಿಗೂ ಶಕ್ತಿ ಯೋಜನೆ ಜಾರಿಯಲ್ಲಿ ಇರಲಿದೆ. ಸರ್ಕಾರ ಶಕ್ತಿ ಯೋಜನೆ ಘೋಷಿಸಿದ 15 ದಿನದಲ್ಲೇ ಜಾರಿಗೆ ತರಲಾಗಿದೆ. ಹಿಂದಿನ ಸರ್ಕಾರದಲ್ಲಿ ಇದ್ದ ಬಸ್, ಸಿಬ್ಬಂದಿ ಕೊರತೆ ನಡುವೆಯೂ ಯೋಜನೆ ಜಾರಿಯಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲಾಗಿದೆ.
ನಾಲ್ಕು ಸಾರಿಗೆ ನಿಗಮಗಳಲ್ಲಿ ಚಾಲಕ, ಕಂಡಕ್ಟರ್ ಸೇರಿ ಒಂಬತ್ತು ಸಾವಿರ ಹುದ್ದೆ ಭರ್ತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಶೀಘ್ರವೇ ನೇಮಕ ಆದೇಶ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.
ವಿಜಯವಾಣಿ ಕಚೇರಿಯಲ್ಲಿ ಸೋಮವಾರ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ 1,700 ಹುದ್ದೆಗಳು ಭರ್ತಿಯಾಗಿವೆ. ಇನ್ನುಳಿದ ಮೂರು ನಿಗಮಗಳ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವಿವಿಧ ಹಂತದ ಪರಿಶೀಲನೆಗಳು ನಡೆದಿವೆ. ಇದರೊಂದಿಗೆ ನಾಲ್ಕು ನಿಗಮಗಳಲ್ಲಿ ಅನುಕಂಪದ ಆಧಾರಿತ ಒಟ್ಟು 553 ಹುದ್ದೆಗಳನ್ನು ತುಂಬಲಾಗಿದೆ. ಹುದ್ದೆಗಳ ಭರ್ತಿ 2016ರಲ್ಲಿ ನಡೆದದ್ದೇ ಕೊನೇ. ನಂತರ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೊಸದಾಗಿ ನೇಮಕಗಳಾಗಿರಲಿಲ್ಲ. ಇದರಿಂದಾಗಿ ಶಕ್ತಿ ಯೋಜನೆ ಜಾರಿಗೆ ದೊಡ್ಡ ಸವಾಲಾಗಿತ್ತು ಎಂದರು.
ಕೇಂದ್ರ ಸರ್ಕಾರಕ್ಕೆ ಪತ್ರ: ಇವಿ ಬಸ್ಗಳಿಗೆ ನೀಡುತ್ತಿರುವ ತಲಾ 40 ಲಕ್ಷ ರೂ. ಸಹಾಯಧನವನ್ನು ನೇರವಾಗಿ ರಾಜ್ಯದ ಬೊಕ್ಕಸಕ್ಕೆ ಭರಿಸಿ, ನೀತಿ ಬದಲಾಯಿಸಲು ಕೋರಿ ಕರ್ನಾಟಕ ಸೇರಿ ಹಲವು ರಾಜ್ಯಗಳು ಕೇಂದ್ರಕ್ಕೆ ಪತ್ರ ಬರೆದರೂ ಸ್ಪಂದಿಸಿಲ್ಲ. ಇವಿ ವಾಹನಗಳ ಪೂರೈಕೆಗೆ ರಾಜ್ಯ ಸರ್ಕಾರ ಟೆಂಡರ್ ಕರೆಯುತ್ತದೆ. ಒಪ್ಪಂದ ಮಾಡಿಕೊಂಡ ಖಾಸಗಿ ಕಂಪನಿಗಳಿಗೆ ಕೇಂದ್ರ ಸರ್ಕಾರ ಸಬ್ಸಿಡಿ ಜಮಾ ಮಾಡುತ್ತದೆ.ಈ ಬಸ್ಗಳಿಗೆ ಕಂಡಕ್ಟರ್ ನೇಮಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಚಾಲಕರ ನೇಮಕ ಹಾಗೂ ಬಸ್ಗಳ ನಿರ್ವಹಣೆ ಗುತ್ತಿಗೆ ಪಡೆದ ಖಾಸಗಿ ಕಂಪನಿಗಳದ್ದಾಗಿದೆ. ಬಿಎಂಟಿಸಿ ಇವಿ ಬಸ್ಗಳಲ್ಲಿ ಕೇರಳದ ಒಂಬತ್ತು ಜನರನ್ನು ಖಾಸಗಿ ಕಂಪನಿ ನೇಮಿಸಿಕೊಂಡಿತ್ತು. ಆದರೆ ಪ್ರತಿಪಕ್ಷ ಬಿಜೆಪಿ ಇದನ್ನೇ ದೊಡ್ಡದಾಗಿ ಬಿಂಬಿಸಿ, ಕನ್ನಡಿಗರ ಹೊಟ್ಟೆ ಮೇಲೆ ಹೊಡೆಯುತ್ತಿರುವ ಕಾಂಗ್ರೆಸ್ ಎಂದು ಟೀಕಿಸಿತು. ಕೇರಳದವರ ನೇಮಕಕ್ಕೆ ಯಾರು ಕಾರಣವೆಂದು ವಿವರಿಸಿ, ಕೇಂದ್ರ ಸರ್ಕಾರಕ್ಕೆ ನೀತಿ ಬದಲಾಯಿಸಲು ತಿಳಿಸಿ ಎಂದು ಪ್ರತ್ಯುತ್ತರಿಸಿದ ನಂತರ ಮೌನಕ್ಕೆ ಶರಣಾದರು ಎಂದು ರಾಮಲಿಂಗಾರೆಡ್ಡಿ ತಿವಿದರು.
10 ಸಾವಿರ ಟ್ರಿಪ್ ಹೆಚ್ಚಳ: ಮಹಿಳೆಯರ ಉಚಿತ ಪ್ರಯಾಣದ ದೃಷ್ಟಿಯಿಂದ 10 ಸಾವಿರ ಟ್ರಿಪ್ಗಳನ್ನು ಹೆಚ್ಚಿಸಲಾಗಿದೆ. ಜತೆಗೆ ಶಾಲಾ ಮಕ್ಕಳ ಓಡಾಟಕ್ಕೆ ತೊಂದರೆಯಾಗದಂತೆ ಮತ್ತಷ್ಟು ಬಸ್ ಒದಗಿಸಲಾಗಿದೆ. ಹಿಂದೆ ಕೋವಿಡ್ ಅವಧಿಯಲ್ಲಿ ಲಾಕ್ಡೌನ್ ಕಾರಣಕ್ಕೆ 3800 ಶೆಡ್ಯೂಲ್ ರದ್ದಾಗಿತ್ತು. ಅದೆಲ್ಲಕ್ಕೂ ನಾವು ಮತ್ತೆ ಚಾಲನೆ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಕೇಂದ್ರದ ಆದೇಶದಂತೆ ನಿರ್ಧಾರ: ವಾಹನಗಳಿಗೆ ಅತಿಸುರಕ್ಷತೆ ನೋಂದಣಿ ಫಲಕ (ಎಚ್ಎಸ್ಆರ್ಪಿ) ಅಳವಡಿಕೆಗೆ ಸಂಬಂಧಿಸಿದ ವ್ಯಾಜ್ಯವು ಹೈಕೋರ್ಟ್ನಲ್ಲಿ ಜೂ.12ರಂದು ವಿಚಾರಣೆಗೆ ಬರಲಿದೆ. ಎಚ್ಎಸ್ಆರ್ಪಿ ಅಳವಡಿಕೆಗೆ ಸಂಬಂಧಿಸಿದಂತೆ ಕೋರ್ಟ್ ನೀಡಲಿರುವ ಸೂಚನೆಯಂತೆ ಸರ್ಕಾರ ಕ್ರಮವಹಿಸಲಿದೆ ಎಂದರು. ಆಂತರಿಕ ಸುರಕ್ಷತೆ ಮತ್ತಿತರ ಕಾರಣಗಳ ಹಿನ್ನೆಲೆಯಲ್ಲಿ ವಾಹನಗಳಿಗೆ ಎಚ್ಎಸ್ಆರ್ಪಿ ಕಡ್ಡಾಯ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ. ಅದರಂತೆಯೇ ರಾಜ್ಯ ಸರ್ಕಾರ ಕ್ರಮವಹಿಸಿದ್ದು, ಜನರ ಮನವಿಗೆ ಎರಡು ಬಾರಿ ಅವಧಿ ವಿಸ್ತರಿಸಿದ್ದನ್ನು ರಾಮಲಿಂಗಾರೆಡ್ಡಿ ನೆನಪಿಸಿದರು.
ಹೊರೆ ಆದಾಯ: ಬಿಜೆಪಿ ಅಧಿಕಾರ ಬಿಡುವಾಗ ನಿಗಮಗಳ ಮೇಲೆ 5,800 ಕೋಟಿ ರೂ. ಸಾಲದ ಹೊರೆ ಉಳಿಸಿತ್ತು. ರಾಜ್ಯ ಸರ್ಕಾರ ಶಕ್ತಿ ಯೋಜನೆ ವೆಚ್ಚ ಭರಿಸುವ ಜತೆಗೆ 700 ಕೋಟಿ ರೂ. ತೆರಿಗೆ ವಿನಾಯಿತಿ ನೀಡಿದೆ. ವಿವಿಧ ವಿನಾಯಿತಿಗಳ ವೆಚ್ಚವನ್ನೂ ತುಂಬಿಕೊಡುತ್ತಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು. ಸೇವಾ ಮನೋಭಾವದ ಸಾರಿಗೆ, ಮೆಟ್ರೋ ಸಂಸ್ಥೆಗಳಲ್ಲಿ ಲಾಭ-ನಷ್ಟದ ಪ್ರಶ್ನೆ ಉದ್ಭವಿಸುವುದಿಲ್ಲ. ಆದರೂ ಕೆಎಸ್ಆರ್ಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳು ಲಾಭದಲ್ಲಿದ್ದರೆ, ವಾಯವ್ಯ ನಷ್ಟದಲ್ಲಿದ್ದು, ಬಿಎಂಟಿಸಿಗೆ ನಷ್ಟ-ಆದಾಯ ಎರಡೂ ಇಲ್ಲ. ಕೆಎಸ್ಆರ್ಟಿಸಿ ಆದಾಯ ಕಳೆದ ಏಳು ವರ್ಷಗಳಲ್ಲಿ ಕ್ರಮೇಣ ಏರಿಕೆಯಾಗಿದೆ. 2016- 2738 ಕೋಟಿ ರೂ., 2017-2975, 2018- 3131, 2019ರಲ್ಲಿ-3182, 2020- 1569 (ಕರೊನಾ ಕಾರಣ), 2021-2037, 2022-3349 ಮತ್ತು 2023ರಲ್ಲಿ 3930 ಕೋಟಿ ರೂ. ಗಳಿಸಿದೆ ಎಂದು ರಾಮಲಿಂಗಾರೆಡ್ಡಿ ವಿವರಿಸಿದರು.
ಒತ್ತುವರಿ ತೆರವಿಗೆ ಕ್ರಮ: ಸಾರಿಗೆ ನಿಗಮಗಳ ಪೈಕಿ ಬೆಂಗಳೂರು ಮಹಾನಗರ ಸಾರಿಗೆ ನಿಗಮವು ಅತಿಹೆಚ್ಚಿನ 1,400 ಎಕರೆ ಆಸ್ತಿ ಹೊಂದಿದೆ. ಈ ಪೈಕಿ ಕೆಲವು ಆಸ್ತಿ ಒತ್ತುವರಿಯಾಗಿರುವುದು ಪತ್ತೆಯಾಗಿದ್ದು, ಕೆಲವೆಡೆ ತೆರವಿಗೆ ಕ್ರಮಕೈಗೊಂಡಿದ್ದು, ಹಲವರು ಕೋರ್ಟ್ ಮೊರೆ ಹೋಗಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಸ್ಮಾರ್ಟ್ ಕಾರ್ಡ್ಗೆ ತೊಡಕು: ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ವಿತರಣೆ ಚಿಂತನೆಯಿತ್ತು. ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಡಕುಗಳುಂಟಾಗಿ ವಿಳಂಬವಾಗಿದೆ. ಬಿಎಂಟಿಸಿ ವ್ಯಾಪ್ತಿಯಲ್ಲಿ ಕಾರ್ಯಸಾಧು ವಲ್ಲವೆಂಬ ಅಭಿಪ್ರಾಯಗಳಿವೆ. ಸದ್ಯಕ್ಕೆ ಆಧಾರ್ ಕಾರ್ಡ್ ಬಳಕೆಯೇ ಮುಂದುವರಿಯಲಿದ್ದು, ಸ್ಮಾರ್ಟ್ ಕಾರ್ಡ್ ವಿತರಣೆ ಬಗ್ಗೆ ಮರುಚಿಂತನೆ ನಡೆಸಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.
ಸೇನೆಯಲ್ಲೂ ಈ ಸೌಲಭ್ಯವಿಲ್ಲ: ನಿಗಮಗಳ ಸಿಬ್ಬಂದಿ ಕರ್ತವ್ಯದಲ್ಲಿರಲಿ, ಇಲ್ಲದಿರಲಿ ಅಪಘಾತದಲ್ಲಿ ಮೃತರಾದರೆ ಅವರ ಕುಟುಂಬಗಳಿಗೆ ಒಂದು ಕೋಟಿ ರೂ. ವಿಮಾ ಪರಿಹಾರ ನೀಡಲಾಗುತ್ತದೆ. ದೇಶದ ಯಾವುದೇ ನಿಗಮಗಳಲ್ಲಿ ಇಂತಹ ವ್ಯವಸ್ಥೆಯಿಲ್ಲ, ಸೇನೆಯಲ್ಲಿ 60 ಲಕ್ಷ ರೂ. ವಿಮಾ ಪರಿಹಾರ ವಿತರಣೆ ಸೌಲಭ್ಯವಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು. ಸಿಬ್ಬಂದಿ ನಿವೃತ್ತಿಗೆ ಮುನ್ನ ಮೃತರಾದರೆ 10 ಲಕ್ಷ ರೂ., ಅಪಘಾತದಲ್ಲಿ ಪ್ರಯಾಣಿಕರು ಮೃತಪಟ್ಟರೆ 10 ಲಕ್ಷ ರೂ. ವಿಮಾ ಪರಿಹಾರವಿದೆ. ಸಿಬ್ಬಂದಿ ಮಕ್ಕಳಿಗೆ ಶಿಷ್ಯವೇತನ ಹೆಚ್ಚಿಸಿದ್ದು, ಸಿಬ್ಬಂದಿ ಒಬ್ಬ ಬದಲು ಇಬ್ಬರು ಮಕ್ಕಳಿಗೂ ಈ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
. ಎಲ್ಲ ಬೆಲೆಗಳು ಏರಿಕೆಯಾಗಿದ್ದರೂ ಬಸ್ ಪ್ರಯಾಣ ದರ ಏರಿಕೆ ಸದ್ಯಕ್ಕಿಲ್ಲ
. ಸಾರಿಗೆ ನಿಗಮಗಳ ಸಿಬ್ಬಂದಿ ವೇತನ ಪರಿಷ್ಕರಣೆ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ
. ಪ್ರಯಾಣಿಕರ ದಟ್ಟಣೆ ತಪ್ಪಿಸಲು ನಿಗಮಗಳ ಮಧ್ಯೆ ಸಮನ್ವಯಕ್ಕೆ ಸೂಚನೆ
. ಬಸ್ ನಿಲ್ದಾಣ, ಕ್ಯಾಂಟೀನ್ಗಳ ಸುಧಾರಣೆಗೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ