ಕುತೂಹಲಕಾರಿ ‘ನಿಮ್ಮ ಗಮನಕ್ಕೆ’ : ರಂಗಭೂಮಿ ಕಲಾವಿದರ ತಂಡದಿಂದ ಮೂಡಿಬಂದ ಸಸ್ಪೆನ್ಸ್-ಥ್ರಿಲ್ಲರ್ ಕಿರುಚಿತ್ರ

ನಿಮ್ಮ ಗಮನಕ್ಕೆ ಪೋಸ್ಟರ್
ನಿಮ್ಮ ಗಮನಕ್ಕೆ ಪೋಸ್ಟರ್
Published on

ಪ್ರಮುಖ ಮುಖ್ಯಾಂಶಗಳು

  • ಈಜಿಪ್ತಿಯನ್-ಅಮೆರಿಕನ್ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ನಲ್ಲಿ ಮೆಚ್ಚುಗೆ ಗಳಿಸಿದ ಕಿರುಚಿತ್ರ
  • ರಂಗಭೂಮಿ ಕಲಾವಿದ ಧನಂಜಯ್ ನಿರ್ದೇಶನ
  • ಕುತೂಹಲ ನಿರೂಪಣೆಯಲ್ಲಿ ಸಾಗುವ ಕಥೆ
ಬೆಂಗಳೂರು: ರಂಗಭೂಮಿ ಕಲಾವಿದ ಧನಂಜಯ ನಟಿಸಿ, ನಿರ್ದೇಶಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಕಿರುಚಿತ್ರ ‘ನಿಮ್ಮ ಗಮನಕ್ಕೆ’. ಈಗಾಗಲೇ ಈಜಿಪ್ತಿಯನ್-ಅಮೆರಿಕನ್ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ಸೇರಿ ಹಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಈ ಶಾರ್ಟ್ ಫಿಲಂ ವಿಮರ್ಶಕರಿಂದ ಮೆಚ್ಚುಗೆ ಗಳಿಸಿದೆ. ಸದ್ಯ ಫಿಲಂ ಫೆಸ್ಟಿವಲ್ ಟೂರ್ ಮುಗಿಸಿರುವ ಚಿತ್ರತಂಡ, ಇತ್ತೀಚೆಗಷ್ಟೆ ಕಿರುಚಿತ್ರವನ್ನು ಅಧಿಕೃತವಾಗಿ ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡಿದೆ. ಕಿರುಚಿತ್ರದಲ್ಲಿ ಶಿಶಿರ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ‘ಇದೊಂದು ಪ್ರಯೋಗಾತ್ಮಕ ಕಿರುಚಿತ್ರ. ರಂಗಭೂಮಿ ಕಲಾವಿದರಾಗಿರುವ ನಾವು ಅದಕ್ಕೂ ಮೀರಿ ಏನಾದರೂ ಮಾಡಬೇಕು ಅಂತ ತೀರ್ಮಾನಿಸಿ ಈ ಕಿರುಚಿತ್ರದ ಸಾಹಸಕ್ಕೆ ಮುಂದಾದೆವು. ಈ ಶಾರ್ಟ್ ಫಿಲಂ ನಮಗೊಂದು ಹೊಸ ಅನುಭವ ನೀಡಿದೆ. ರಿಯಲಿಸ್ಟಿಕ್ ಆಗಿ ನಿರೂಪಣೆ ಮಾಡಿದ್ದೇವೆ. ಕೆಲವೇ ಪಾತ್ರಗಳಿದ್ದರೂ, ಕಥೆಯ ಕುತೂಹಲವನ್ನು ಹಿಡಿದಿಟ್ಟುಕೊಂಡಿದ್ದೇವೆ. ಪ್ರತಿ ಪಾತ್ರಗಳು ಅಡ್ಡಗೋಡೆ ಮೇಲೆ ದೀಪ ಇಟ್ಟಂತಿವೆ. ಏನನ್ನೂ ನೇರವಾಗಿ ಹೇಳಿಲ್ಲ. ಅಂತಿಮವಾಗಿ ಜೀವನದಲ್ಲಿ ಬೇಜವಾಬ್ದಾರಿಯಾಗಿ ತೆಗೆದುಕೊಳ್ಳುವ ನಿರ್ಧಾರಗಳು ಕೆಲವೊಮ್ಮೆ ದೊಡ್ಡ ಬೆಲೆ ತೆರುವಂತೆ ಮಾಡುತ್ತವೆ. ಅದು ಅಂತ್ಯವೋ ಅಥವಾ ಆರಂಭವೋ? ಎಂಬ ಸಂದೇಶ ನೀಡಿದ್ದೇವೆ. ಧನಂಜಯ್ ಕಥೆ ಬರೆದು ನಿರ್ದೇಶಿಸಿದ್ದು, ನಾನು ಚಿತ್ರಕಥೆ, ಸಂಭಾಷಣೆ ಬರೆದು ನಟಿಸಿದ್ದೇನೆ’ ಎಂದು ನಟ ಶಿಶಿರ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ವೇದಾಂತ್ ಅತಿಶಯ್ ಜೈನ್ ಹಿನ್ನೆಲೆ ಸಂಗೀತ, ಸಚಿನ್ ಕುಮಾರ್ ಪುತ್ತೂರು ಛಾಯಾಗ್ರಹಣ ಕಿರುಚಿತ್ರಕ್ಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net