

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ಎಷ್ಟೆಲ್ಲಾ ಕಾರ್ಯಕ್ರಮಗಳನ್ನು ಘೋಷಿಸಿದರೂ ಅಪಘಾತ ಹಾಗೂ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳು ಚಿಕಿತ್ಸೆಗೆ ಪರದಾಡುವುದು ಇನ್ನೂ ತಪ್ಪಿಲ್ಲ. ಇದಕ್ಕೆ ನಿದರ್ಶನ ಎಂದರೆ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ನಿಮ್ಹಾನ್ಸ್.
ನಿಮ್ಹಾನ್ಸ್ ನಲ್ಲಿ ಹಾಸಿಗೆ ಕೊರತೆ, ಚಿಕಿತ್ಸೆ ವಿಳಂಬ ಎಂಬುದು ದಶಕಗಳಿಂದಲೂ ಕೇಳಿಬರುತ್ತಿರುವ ದೂರು. ಸಂಸ್ಥೆಯಲ್ಲಿ ಸೌಕರ್ಯ ಹೆಚ್ಚಿದಂತೆ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿರುವುದು ಪ್ರಮುಖ ಕಾರಣವಾದರೆ, ನಿಮ್ಹಾನ್ಸ್ಗೆ ಕೇವಲ ಬೆಂಗಳೂರಿನವರು ಮಾತ್ರವಲ್ಲದೆ ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ರೋಗಿಗಳು ಬರುತ್ತಾರೆ. ಇದರಿಂದ ಸಕಾಲದಲ್ಲಿ ಚಿಕಿತ್ಸೆ ಪಡೆಯಲಾಗದೆ ರೋಗಿಗಳು ಪರದಾಡುವ ಸ್ಥಿತಿ ಇಲ್ಲಿನ ನಿತ್ಯದ ಸಮಸ್ಯೆಯಾಗಿದೆ.
ಹಾಸಿಗೆ ಕೊರತೆಯಿಂದಾಗಿ ಚಿಕಿತ್ಸೆಗೆ ಬರುವ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಹೋಗುವಂತೆ ಸೂಚಿಸಲಾಗುತ್ತಿದೆ. ಮಂಡ್ಯ ಜಿಲ್ಲಾ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ರೆಫರ್ ಆಗಿದ್ದ 15 ವರ್ಷದ ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕಿಸಿರುವುದು ತಿಳಿದು ಬಂದಿದೆ. ಇದೊಂದೇ ಪ್ರಕರಣವಲ್ಲ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ.ವಸಮಸ
ತುರ್ತುನಿಗಾ ಘಟಕ ಸದಾ ಭರ್ತಿ:
ನಿಮ್ಹಾನ್ಸ್ನ ತುರ್ತುನಿಗಾ ಘಟಕವು ನಿತ್ಯವೂ ರೋಗಿಗಳಿಂದ ತುಂಬಿರುತ್ತದೆ. ಇಲ್ಲಿಗೆ ಬರುವ ಎಲ್ಲಾ ಪ್ರಕರಣಗಳು ನಿರ್ಣಾಯಕವಾಗಿರುತ್ತವೆ. ಇತರೆ ಆಸ್ಪತ್ರೆಗಳಲ್ಲಿ ಪರಿಣಿತ ತಜ್ಞರು ಇಲ್ಲದ ಕಾರಣ ಆಪಘಾತದಲ್ಲಿ ತಲೆಗೆ ಪೆಟ್ಟಾದವರು, ಸ್ಟ್ರೋಕ್, ಮಿದುಳು ರಕ್ತಸ್ರಾವ ದಂತಹ ಪ್ರಕರಣಗಳನ್ನು ನಿಮ್ಹಾನ್ಸ್ಗೆ ರೆಫರ್ ಮಾಡಿ ಕಳುಹಿಸುತ್ತಾರೆ. ಆದರೆ ಆಸ್ಪತ್ರೆಯಲ್ಲಿರುವ ಮೂಲಸೌಕರ್ಯ ಹಾಗೂ ಮಾನವ ಸಂಪನ್ಮೂಲಕ್ಕೆ ಇದು ಹೊರೆಯಾಗಿ ಪರಿಣಮಿಸಿದೆ. ಆದಾಗಿಯೂ ನಮ್ಮಲ್ಲಿ ಬರುವ ರೋಗಿಗಳನ್ನು ಪರೀಕ್ಷೆ ಮಾಡದೆ ವಾಪಸ್ ಕಳುಹಿಸುವುದಿಲ್ಲ ಎನ್ನುತ್ತಾರೆ ವೈದ್ಯರು.
ಯಾರಿಗೂ ಚಿಕಿತ್ಸೆ ನಿರಾಕರಿಸುವುದಿಲ್ಲ:
ಸದ್ಯ ನಿಮ್ಹಾನ್ಸ್ನಲ್ಲಿ ಹೊರ ರೋಗಿಗಳು ಹಾಗೂ ಫಾಲೋಅಪ್ ಗಾಗಿ ನಿತ್ಯ 1,600-1,800 ಮಂದಿ ಆಸ್ಪತ್ರೆಗೆ ಆಗಮಿಸುತ್ತಾರೆ. ಕ್ಯಾಶುಯಲ್ಟಿಗೆ ಇರುವುದು 120 ಹಾಸಿಗೆ. ಆದರೆ ನಿತ್ಯ 160-180 ರೋಗಿಗಳು ಆಗಮಿಸುತ್ತಾರೆ. ಪ್ರತಿ ರೋಗಿಗೂ ಸಮಾಲೋಚನೆ ನೀಡಲಾಗುತ್ತದೆ. ಹೊರ ರೋಗಿಗಳು ಹಾಗೂ ಫಾಲೋಅಪ್ಗಾಗಿ ಬರುವವರು ಕಾಯಬೇಕಾಗುತ್ತದೆ ಎನ್ನುವುದನ್ನು ಹೊರತು ಪಡಿಸಿ ಬೇರೆ ಸಮಸ್ಯೆ ಇಲ್ಲ. ಆದರೆ ಕ್ಯಾಶುಯಲ್ಟಿಗೆ ಬರುವ ರೋಗಿಗಳು ಬಹುತೇಕ ಗಂಭೀರ ಸ್ಥಿತಿಯಲ್ಲಿರುತ್ತಾರೆ. ನಿಮ್ಹಾನ್ಸ್ ಪ್ರಮುಖವಾಗಿ ತೃತೀಯ ಆರೈಕೆ ಆಸ್ಪತ್ರೆಯಾಗಿದ್ದು, ಬರುವ ಪ್ರತಿಯೊಬ್ಬ ರೋಗಿಯನ್ನು ದಾಖಲಿಸಲು ಸಾಧ್ಯವಿಲ್ಲ. ವಿಶೇಷ ಆರೈಕೆಯ ಅಗತ್ಯವಿರುವ ರೋಗಿಗಳಿಗೆ ನಾವು ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದು ವೈದ್ಯಾಧಿಕಾರಿ ಹೇಳುತ್ತಾರೆ.
ಮೂಲಸೌಕರ್ಯ ಹೆಚ್ಚಿಸುವ ಅಗತ್ಯವಿದೆ:
ಸಂಸ್ಥೆಯಲ್ಲಿ ತುತು ನಿಗಾ ಘಟಕದಲ್ಲಿ 120 ಹಾಸಿಗೆ, 44 ವೆಂಟಿಲೇಟರ್ ಸೇರಿ 1,096 ಹಾಸಿಗೆಗಳಿವೆ. ನಿತ್ಯ ಚಿಕಿತ್ಸೆಗೆ ಬರುವವರ ಸಂಖ್ಯೆ 2 ಸಾವಿರ ಇದೆ. ಇವರಲ್ಲಿ 400ಕ್ಕೂ ಹೆಚ್ಚು ರೋಗಿಗಳಿಗೆ ದಾಖಲಾತಿಯ ಅಗತ್ಯ ಇರುತ್ತದೆ. ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಅದಕ್ಕೆ ಪೂರಕವಾಗಿ ಮಾನವ ಸಂಪನ್ಮೂಲ ಹಾಗೂ ಮೂಲಸೌಕರ್ಯ ಹೆಚ್ಚಿಸುವ ಅಗತ್ಯವಿದೆ. ಜೊತೆಗೆ ಸರ್ಕಾರ ರಾಜ್ಯದಲ್ಲಿ ದ್ವಿತೀಯ ಹಂತದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ. ಇದರಿಂದ ಸಂಸ್ಥೆಯಲ್ಲಿ ಹೊರೆ ಹಾಗೂ ಒತ್ತಡ ಎರಡೂ ಕಡಿಮೆಯಾಗಲಿದೆ ಎಂದಿದ್ದಾರೆ.