ನಿಲುವಳಿ ಸೂಚನೆಗೆ ಮುಂದಾದ ಕಾಂಗ್ರೆಸ್; ಸದನ ಮುಂದೂಡಿಕೆ

Published on

ಬೆಂಗಳೂರು:
ಇಡಿ ಅಧಿಕಾರಿಗಳ ನಡುವಳಿಕೆ ಕುರಿತು ನಿಲುವಳಿ ಸೂಚನೆ ಮಂಡನೆ ಮಾಡಲು ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್ ಮುಂದಾಗಿದ್ದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಅವಕಾಶ ನೀಡಲಿಲ್ಲ. ಈ ಹಂತದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರವೇ ನಡೆದು ಕೋಲಾಹಲ ಏರ್ಪಟ್ಟಿದ್ದರಿಂದ ಸಭಾಪತಿ ಸದನವನ್ನು ಮುಂದೂಡಿದ ಘಟನೆಯೂ ಮೇಲ್ಮನೆಯಲ್ಲಿ ನಡೆಯಿತು.
ಇಡಿ ಅಧಿಕಾರಿಗಳು ವಾಲ್ಮಿಕಿ ಹಗರಣದಲ್ಲಿ ಸಿಎಂ ಹೆಸರು ಹೇಳುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಹಾಗಾಗಿ ಚರ್ಚೆಗೆ ಅವಕಾಶ ಕೊಡಬೇಕು ಎಂದು ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸಿದರು.
ತನಿಖೆ ನಡೆದು ಸತ್ಯಾಂಶ ಹೊರಬರಬೇಕು. ಆದರೆ ಆ ಪ್ರಕ್ರಿಯೆಗೆ ತಡೆಯೊಡ್ಡಲು ಷಡ್ಯಂತ್ರ ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಆದರೂ ಪಟ್ಟು ಬಿಡದ ಆಡಳಿತ ಪಕ್ಷದ ಸದಸ್ಯರು, ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೊಡಿ ಎಂದು ಆಗ್ರಹಿಸತೊಡಗಿದರು. ಈ ನಡುವೆ ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಗೊಂದಲದ ನಡುವೆ ಯಾರು ಏನು ಮಾತನಾಡುತ್ತಿದ್ದಾರೆ ಎನ್ನುವುದು ತಿಳಿಯದಾಯಿತು. ಅನಿವಾರ್ಯವಾಗಿ ಸಭಾಪತಿ ಸದನವನ್ನು ಹತ್ತು ನಿಮಿಶ ಮುಂದೂಡಿದರು.
ಮತ್ತೆ ಸದನ ಸಮಾವೇಶವಾದಾಗ ಸಭಾಪತಿ ಹೊರಟ್ಟಿ ಅವರು, ತಾಂತ್ರಿಕ ಕಾರಣದಿಂದ ಚರ್ಚೆಗೆ ಅವಕಾಶ ಇಲ್ಲ ಎಂದ ಪ್ರಕಟಿಸಿದರು. ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಸಭಾಪತಿ ಮತ್ತೆ ಸದನ ಮುಂದೂಡಿದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net