

ಈಗಾಗಲೇ ಸಿನಿಮಾ ಮಂದಿಯನ್ನೂ ಕರೊನಾ ಬಿಡುತ್ತಿಲ್ಲ. ಎಷ್ಟೇ ಜಾಗೃತೆ ವಹಿಸಿದರೂ ಯಾವುದೋ ಒಂದು ಮಾಯೆಯಲ್ಲಿ ಒಂದು ಅಂಟಿಕೊಳ್ಳುತ್ತಿದೆ. ಈಗಾಗಲೇ ಭಾರತೀಯ ಚಿತ್ರರಂಗದ ಘಟಾನುಘಟಿಗಳು ಈ ಸೋಂಕಿಗೆ ತುತ್ತಾಗಿ, ಬಳಿಕ ಗುಣಮುಖರಾಗಿ ಮರಳಿದ್ದಾರೆ. ಇದೀಗ ಸ್ಯಾಂಡಲ್ವುಡ್ ನಟಿ, ಟಾಲಿವುಡ್, ಕಾಲಿವುಡ್ನಲ್ಲಿಯೂ ಹೆಚ್ಚು ಗುರುತಿಸಿಕೊಂಡಿರುವ ನಟಿ ನಿಕ್ಕಿ ಗಲ್ರಾನಿಗೂ ಕರೊನಾ ಪಾಸಿಟಿವ್ ಇರುವುದು ಖಚಿತವಾಗಿದೆ.
ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ನಿಕ್ಕಿ, ‘ಕಳೆದ ಒಂದು ವಾರದ ಹಿಂದೆಯೇ ನನಗೆ ಕರೊನಾ ಸೋಂಕು ತಗುಲಿದೆ. ಆರೋಗ್ಯದಲ್ಲಿ ಮೊದಲಿಗಿಂತ ಚೇತರಿಕೆ ಕಂಡುಬಂದಿದೆ. ನನ್ನ ಚೇತರಿಕೆಗೆ ಪ್ರಾರ್ಥಿಸಿದ ಎಲ್ಲರಿಗೂ ಮತ್ತು ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದಿದ್ದಾರೆ.
‘ಎಲ್ಲರಂತೆ ಜ್ವರ, ಶೀತ, ಗಂಟಲು ನೋವು ಸೇರಿ ಕರೊನಾ ಲಕ್ಷಣಗಳು ಕಂಡು ಬಂದಿದ್ದರ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದೆ. ಇದೀಗ ಬಹುತೇಕ ಗುಣಮುಖಳಾಗಿದ್ದೇನೆ. ಮನೆಯಲ್ಲಿಯೇ ಹೋಮ್ ಕ್ವಾರಂಟೈನ್ ಆಗಿದ್ದೇನೆ. ಆದರೂ ಮನೆಯಲ್ಲಿ ಹಿರಿಯರು ಇದ್ದ ಕಾರಣ ಕೊಂಚ ಭಯವಾಗಿತ್ತು. ಸಾಧ್ಯವಾದಷ್ಟು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ’ ಎಂದು ಮನವಿ ಮಾಡಿದ್ದಾರೆ. (ಏಜೆನ್ಸೀಸ್)