ನಿಖಿಲ್ ಚುನಾವಣೆಯಲ್ಲಿ ಸೋತಿದ್ದಾನೆ; ಮನುಷ್ಯನಾಗಿ ಸೋತಿಲ್ಲ; ಅನಿತಾ ಕುಮಾರಸ್ವಾಮಿ|Nikhil's mother made an emotional post

a (3)
Published on

ಬೆಂಗಳೂರು: ನನ್ನ ಮಗ ಮೂರನೇ ಸಲ ಸೋತಿದ್ದಾನೆ. ಅವನು ಚುನಾವಣೆಯಲ್ಲಿ ಮಾತ್ರ ಸೋತಿದ್ದಾನೆಯೇ ಹೊರತು ಮನುಷ್ಯನಾಗಿ ಸೋತಿಲ್ಲ(He only lost in the election but not as a human being) , ಅವನ ಮಾನವೀಯತೆ, ಸಹೃದಯತೆ ಸೋತಿಲ್ಲ ಎಂದು ಅವರ ತಾಯಿ ಅನಿತಾ ಕುಮಾರಸ್ವಾಮಿ(Anita Kumaraswamy) ಹೇಳಿದ್ದಾರೆ.

ಚನ್ನಪಟ್ಟಣ ಕ್ಷೇತ್ರದ ಫಲಿತಾಂಶದ ನಂತರ ಇದೇ ಮೊದಲ ಬಾರಿಗೆ ಭಾವನಾತ್ಮಕ ಪೋಸ್ಟ್ ಮಾಡಿರುವ ಅವರು, ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿ, ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಪರಾಜಯ ಹೊಂದಿದ್ದಾನೆ, ಒಪ್ಪುತ್ತೇನೆ. ರಾಜಕಾರಣದಲ್ಲಿ ನನಗಾಗಲಿ, ನನ್ನ ಪತಿಗಾಗಲಿ ಅಥವಾ ನನ್ನ ಮಾವನವರಿಗೇ ಆಗಲಿ ಗೆಲುವು, ಸೋಲು ಹೊಸದೇನಲ್ಲ. ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿದ್ದೇವೆ. ಗೆದ್ದಾಗ ಬೀಗಿಲ್ಲ, ಸೋತಾಗ ಕುಗ್ಗಿಲ್ಲ. ಸೋತ ಹತಾಶೆಯಲ್ಲಿ ಅನ್ಯರನ್ನು ಹೀಗಳೆದಿಲ್ಲ. ನನ್ನ ಮಗನಿಗೂ ಇದೇ ಅನ್ವಯ ಆಗುತ್ತದೆ ಎಂದಿದ್ದಾರೆ.

ನನ್ನ ಮಗನ ಬಗ್ಗೆ ರಾಜ್ಯದ ಜನತೆಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಅವನು ಒಳ್ಳೆಯ ಮಗ, ಒಳ್ಳೆಯ ಪತಿ, ಒಳ್ಳೆಯ ತಂದೆ. ರಾಜಕಾರಣಕ್ಕೆ ಬರುವ ಮುನ್ನ ಒಳ್ಳೆಯ ನಾಯಕ ನಟ. ಅವನಂಥ ಒಳ್ಳೆಯ ಮಗನನ್ನು ಪಡೆದಿದ್ದಕ್ಕಾಗಿ ನಾನೂ ನನ್ನ ಪತಿ ಹೆಮ್ಮೆಪಡುತ್ತೇವೆ ಎಂದು ಹೇಳಿದ್ದಾರೆ.

ತಾಯಿಯಾಗಿ ಅವನ ಯಶಸ್ಸನ್ನು ಸಂಭ್ರಮಿಸುತ್ತೇನೆ. ಅವನಿಗೆ ಕಷ್ಟ ಎದುರಾದಾಗ ಕಣ್ಣೀರಿಟ್ಟಿದ್ದೇನೆ. ನನ್ನ ಕರುಳಬಳ್ಳಿಯ ಮೇಲೆ ನನಗಷ್ಟು ಮಮಕಾರ ಇರುತ್ತದಲ್ಲವೇ? ನನ್ನಂತಹ ಎಲ್ಲ ತಾಯಂದಿರಿಗೂ ನನ್ನ ಭಾವನೆಗಳು ಅರ್ಥವಾಗುತ್ತವೆ ಎಂದು ತಿಳಿಸಿದ್ದಾರೆ.

ನನ್ನ ಮಗ 3ನೇ ಸಲ ಸೋತಿದ್ದಾನೆ. ಅವನು ಚುನಾವಣೆಯಲ್ಲಿ ಮಾತ್ರ ಸೋತಿದ್ದಾನೆಯೇ ಹೊರತು ಮನುಷ್ಯನಾಗಿ ಸೋತಿಲ್ಲ, ಅವನ ಮಾನವೀಯತೆ, ಸಹೃದಯತೆ ಸೋತಿಲ್ಲ. ಅವನ ಮನಸ್ಸು, ಹೃದಯ ವೈಶಾಲ್ಯತೆ ಏನೆಂದು ತಾಯಿಯಾಗಿ ನನಗೆ ಚನ್ನಾಗಿ ಗೊತ್ತು ಎಂದು ಹೇಳಿದ್ದಾರೆ.

ಇಂದಲ್ಲ, ನಾಳೆ ಜನಸೇವೆ ಮಾಡುವ ಅವಕಾಶ ಅವನಿಗೆ ಸಿಕ್ಕೇ ಸಿಗುತ್ತದೆ ಎನ್ನುವ ಅಚಲ ನಂಬಿಕೆ ನನ್ನದು ಎಂದು ಅನಿತಾ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net