ನಾಗಮಂಗಲ ಗಲಭೆಗೆ ವೋಟ್​ಬ್ಯಾಂಕ್ ರಾಜಕಾರಣದ ಮತಾಂಧರೇ ಕಾರಣ ಎಂದ ನಿಖಿಲ್ ಕುಮಾರಸ್ವಾಮಿ

jds
Published on

ಬೆಂಗಳೂರು: ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಗಲಭೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ. ಈ ಸರ್ಕಾರ ವೋಟ್ ಬ್ಯಾಂಕ್ ರಾಜಕೀಯ ಮಾಡದೇ ಮತಾಂಧ ಶಕ್ತಿಗಳನ್ನು ಹತ್ತಿಕ್ಕಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಗಲಭೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ. ಈ ಸರ್ಕಾರ ವೋಟ್ ಬ್ಯಾಂಕ್ ರಾಜಕೀಯ ಮಾಡದೇ ಮತಾಂಧ ಶಕ್ತಿಗಳನ್ನು ಹತ್ತಿಕ್ಕಬೇಕು. ಕೆರಗೋಡು ಹನುಮ ಧ್ವಜ ತೆರವು, ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ನಂತರ ಈ ಸರ್ಕಾರವು ಹೇಗೆ ದೇಶ ವಿರೋಧಿ ಶಕ್ತಿಗಳಿಗೆ ರಾಜ್ಯವನ್ನು ಒತ್ತೆ ಇಟ್ಟಿದೆ ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಣೇಶ ವಿಸರ್ಜನೆ ವೇಳೆ ಮತಾಂಧರು ದೂರ್ತತನ ಪ್ರದರ್ಶಿಸಿದ್ದಾರೆ. ಗಣಪತಿ ಭಕ್ತರ ಮೇಲೆ ದುರುದ್ದೇಶಪೂರ್ವಕವಾಗಿ ದಾಳಿ ನಡೆಸಿ ಕೋಮು ದಳ್ಳುರಿ ಹೊತ್ತಿಸಿ ಜನರು, ಪೊಲೀಸರ ಮೇಲೆ ಪೂರ್ವಯೋಜಿತವಾಗಿ ದೌರ್ಜನ್ಯ ನಡೆಸಿರುವುದರ ಹಿಂದೆ ಕಾಣದ ಕೈಗಳ ಕೈವಾಡ ಇದೆ ಎನ್ನುವುದು ಸ್ಪಷ್ಟ ಎಂದು ದೂರಿದ್ದಾರೆ.

ಸಮಗ್ರ ತನಿಖೆ ನಡೆಸಬೇಕು: ಕಲ್ಲುಗಳ ಸುರಿಮಳೆಗರೆದ ಪುಂಡರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ಪ್ರಚೋದಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲಿ ಸ್ಥಳೀಯ ಪೊಲೀಸರ ವೈಫಲ್ಯವೂ ಇರುವುದರಿಂದ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರ್ಕಾರ ರಾಜಕೀಯ ಸ್ವಾರ್ಥಕ್ಕಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದೇಶವಿರೋಧಿ ಶಕ್ತಿಗಳನ್ನು ಹುರಿದುಂಬಿಸಿ ಓಲೈಕೆ ರಾಜಕಾರಣ ಮಾಡುತ್ತಿರುವುದರ ನೇರ ಪರಿಣಾಮ ಇದಾಗಿದೆ. ಹಿಂದೂಗಳ ಮೇಲಿನ ಈ ದಾಳಿಗೆ ಪ್ರತಿಯಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ಸಮುದಾಯವನ್ನು ಅತಿಯಾಗಿ ಓಲೈಸಿ ತುಷ್ಟೀಕರಣ ಮಾಡಿದ ಫಲವಾಗಿ ನಾಗಮಂಗಲದಲ್ಲಿ ಈ ಘಟನೆ ನಡೆದಿದೆ. ಸಾರ್ವಜನಿಕರು ಶಾಂತಿ ಕಾಪಾಡಬೇಕು ಎನ್ನುವುದು ನನ್ನ ಕಳಕಳಿಯ ಮನವಿ ಎಂದು ಟ್ಟೀಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net