ನೈಟ್​ ಕರ್ಫ್ಯೂ ವಾಪಸ್​: ಬಾರ್ ಮಾಲೀಕರು, ಅಬಕಾರಿ ಇಲಾಖೆ ಫುಲ್​ ಖುಷ್​

wine_shop_01052020
Published on

ಬೆಂಗಳೂರು: ಇವತ್ತಿನಿಂದ ಜಾರಿ ಆಗಬೇಕಿದ್ದ ನೈಟ್ ಕರ್ಫ್ಯೂವನ್ನು ಅನುಷ್ಠಾನಕ್ಕೆ ಬರುವ ಮೊದಲೇ ಹಿಂಪಡೆದಿದ್ದರಿಂದ ಸಾರ್ವಜನಿಕರಷ್ಟೇ ಅಲ್ಲ, ಬಾರ್ ಮಾಲೀಕರು ಹಾಗೂ ಅಬಕಾರಿ ಇಲಾಖೆಗೂ ಸಂತೋಷವಾಗಿದೆ. ರಾತ್ರಿ ಕರ್ಫ್ಯೂನಿಂದ ನೂರಾರು ಕೋಟಿ ರೂಪಾಯಿ ಆದಾಯ ನಷ್ಟವಾಗುವ ಭೀತಿಗೆ ಒಳಗಾಗಿದ್ದ ಅಬಕಾರಿ ಇಲಾಖೆಯವರು ಹಾಗೂ ಬಾರ್ ಮಾಲೀಕರು ಕೊನೆಗೂ ನಿರಾಳರಾಗಿದ್ದಾರೆ.

ಸಾಮಾನ್ಯವಾಗಿ ಪ್ರತಿವರ್ಷ ಡಿ.24ರಿಂದ ಡಿ.31ರವರೆಗೆ ಮದ್ಯ ಮಾರಾಟದಿಂದ ಅಬಕಾರಿ ಇಲಾಖೆಗೆ 300 ಕೋಟಿ ರೂಪಾಯಿ ಆದಾಯ ಬರುತ್ತದೆ. ಆದರೆ, ಕರ್ಫ್ಯೂನಿಂದಾಗಿ ಈ ಆದಾಯ ಖೋತಾ ಆಗುವ ಆತಂಕವಿತ್ತು. ಆದರೆ, ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ವಿಧಿಸಿ ಬುಧವಾರ ಹೊರಡಿಸಿದ್ದ ಆದೇಶವನ್ನು ಸರ್ಕಾರ ಗುರುವಾರ ಸಂಜೆ ಹಿಂಪಡೆದಿರುವ ಹಿನ್ನೆಲೆಯಲ್ಲಿ ಇಲಾಖೆಗೆ ಹಾಗೂ ಬಾರ್ ಮಾಲೀಕರಿಗೆ ಎದುರಾಗಿದ್ದ ಆತಂಕ ಸದ್ಯ ದೂರವಾದಂತಾಗಿದೆ.

ಮದ್ಯ ಕಿಕ್ ಜೋರು: ನೈಟ್​ ಕರ್ಫ್ಯೂ ಹಿಂಪಡೆದ ಬೆನ್ನಲ್ಲೇ ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಪ್ರಯುಕ್ತ ಬಾರ್ ಹಾಗೂ ಪಬ್‌ಗಳಲ್ಲಿ ಮದ್ಯ ಕಿಕ್ ಮತ್ತಷ್ಟು ಜೋರಾಗುವ ಸಾಧ್ಯತೆ ಇದೆ. ಕಳೆದ ವರ್ಷ ಬಿಯರ್ ಹಾಗೂ ಮದ್ಯದಿಂದ 300 ಕೋಟಿ ರೂ. ಆದಾಯ ಬಂದಿತ್ತು. 18 ಲಕ್ಷ ಬಾಕ್ಸ್ ಐಎಂಎಲ್ ಮಾರಾಟವಾಗಿತ್ತು. ಈ ಬಾರಿ ಮದ್ಯ ಮಾರಾಟದಿಂದ ಕಳೆದ ಸಲಕ್ಕಿಂತ ಮತ್ತಷ್ಟು ಆದಾಯ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net