

ನವದೆಹಲಿ: ಕೊಚ್ಚಿಯಲ್ಲಿ ನಿರ್ಮಿಸಲ್ಪಡುತ್ತಿರುವ ಸ್ವದೇಶಿ ಸಮರ ವಿಮಾನ ವಾಹಕ ನೌಕೆಯ ಹಾರ್ಡ್ವೇರ್ ಕಳವುಗೈದ ಪ್ರಕರಣದಲ್ಲಿ ಇಬ್ಬರ ವಿರುದ್ಧ ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ (ಎನ್ಐಎ) ಚಾರ್ಜ್ಶೀಟ್ ಸಲ್ಲಿಸಿದೆ. ಬಿಹಾರದ ಮುಂಗೇರ್ ಜಿಲ್ಲೆಯ ಸುಮಿತ್ ಕುಮಾರ್ ಸಿಂಗ್ ಮತ್ತು ರಾಜಸ್ಥಾನದ ಹನುಮಗಢ ಜಿಲ್ಲೆಯ ದಯಾರಾಮ್ ಆರೋಪಿಗಳು.
ಇವರ ವಿರುದ್ಧ ರಾಂಡಂ ಆ್ಯಕ್ಸಸ್ ಮೆಮೊರಿ(ಆರ್ಎಎಂ) ಮತ್ತು ಸಾಲಿಡ್ ಸ್ಟೇಟ್ ಹಾರ್ಡ್ ಡ್ರೈವ್ ಕಳವುಗೈದ ಆರೋಪವಿದೆ. ಭಾರತೀಯ ದಂಡ ಸಂಹಿತೆ ಮತ್ತು ಇನ್ಫಾರ್ಮೇಶನ್ ಟೆಕ್ನಾಲಜಿ ಆ್ಯಕ್ಟ್ನ ವಿವಿಧ ಸೆಕ್ಷನ್ಗಳ ಪ್ರಕಾರ ಆರೋಪ ಪಟ್ಟಿ ದಾಖಲಿಸಲಾಗಿದೆ. 2019ರ ಜುಲೈ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಕೊಚ್ಚಿನ ಶಿಪ್ಯಾರ್ಡ್ನ ಆವರಣದಲ್ಲಿ ಈ ಕಳವು ನಡೆದಿದೆ. ಈ ಸಂಬಂಧ ಸೆಪ್ಟೆಂಬರ್ 16ರಂದು ಕೊಚ್ಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದಾಗಿ ಎನ್ಐಎ ಅದೇ ವರ್ಷ ಸೆಪ್ಟೆಂಬರ್ 26ರಂದು ಮತ್ತೆ ಪುನಃ ಕೇಸ್ ದಾಖಲಿಸಿಕೊಂಡು ತನಿಖೆ ಶುರುಮಾಡಿತ್ತು.
ಇದನ್ನೂ ಓದಿ: ಚೀನಾಕ್ಕೆ ಜರ್ಮನಿ ಕಡಕ್ ವಾರ್ನಿಂಗ್!
ವಿವಿಧ ರಾಜ್ಯಗಳಲ್ಲಿ ಒಂಬತ್ತು ತಿಂಗಳ ಕಾಲ ಈ ಬಗ್ಗೆ ವಿಸ್ತೃತ ತನಿಖೆ ನಡೆಸಿದ ಎನ್ಐಎ, ವಿಶೇಷವಾಗಿ ಬಿಹಾರ ಮತ್ತು ರಾಜಸ್ಥಾನಗಳಲ್ಲಿ ಹೆಚ್ಚಿನ ತನಿಖೆ ನಡೆಸಿತ್ತು. ಈ ಇಬ್ಬರು ಅನುಮತಿ ಇಲ್ಲದೆ ನೌಕೆಯನ್ನೇರಿ ಈ ಸೂಕ್ಷ್ಮ ಸಂಕೀರ್ಣ ಭಾಗಗಳನ್ನು ಕಳವುಗೈದಿದ್ದರು. ಈ ವರ್ಷ ಜೂನ್ 10ರಂದು ಇಬ್ಬರನ್ನೂ ಎನ್ಐಎ ಬಂಧಿಸಿತ್ತು. (ಏಜೆನ್ಸೀಸ್)