ಬೆಂಗಳೂರಿನಲ್ಲಿ ಯುವಕರನ್ನು ಉಗ್ರಸಂಘಟನೆಗೆ ಸೆಳೆಯುತ್ತಿದ್ದ ಇಬ್ಬರನ್ನು ಬಂಧಿಸಿದ ಎನ್​ಐಎ

Terror
Published on

ಬೆಂಗಳೂರು: ಐಸಿಸ್​ ಮಾಡ್ಯೂಲ್​ ಪ್ರಕರಣಕ್ಕೆ ಸಂಬಂಧಪಟ್ಟ ಇಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ನಗರದಲ್ಲಿ ನಿನ್ನೆ ಇಬ್ಬರು ಉಗ್ರರನ್ನು ಬಂಧಿಸಿದೆ.

ತಮಿಳುನಾಡು ಮೂಲದ ಅಹ್ಮದ್​ ಅಬ್ದುಲ್ ಕೇಡರ್​​ (40) ಮತ್ತು ಬೆಂಗಳೂರಿನ ಇರ್ಫಾನ್​ ನಾಸೀರ್​ (33) ಬಂಧಿತರು. ಅಬ್ದುಲ್ ಚೆನ್ನೈನ ಬ್ಯಾಂಕ್​ವೊಂದರಲ್ಲಿ ಬಿಜಿನೆಸ್​ ಅನಾಲಿಸ್ಟ್​ ಆಗಿದ್ದ ಹಾಗೇ ಇರ್ಫಾನ್​ ಬೆಂಗಳೂರಿನಲ್ಲಿ ಅಕ್ಕಿ ವ್ಯಾಪಾರ ಮಾಡಿಕೊಂಡಿದ್ದ.

ಬೆಂಗಳೂರು ಮೂಲದ ಐಸಿಸ್​ ಘಟಕದಲ್ಲಿ ಇವರಿಬ್ಬರೂ ಸಕ್ರಿಯವಾಗಿದ್ದ ಬಗ್ಗೆ ಎನ್​ಐಎಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ 2019ರಲ್ಲಿ ಇವರಿಬ್ಬರ ವಿರುದ್ಧವೂ ಸುಮೊಟೊ ಪ್ರಕರಣ ದಾಖಲಿಸಿಕೊಂಡಿತ್ತು.

ಐಸಿಸ್​ ಉಗ್ರರಿಗೆ ವೈದ್ಯಕೀಯ ಸೇವೆ ಸಲ್ಲಿಸಲು ಮತ್ತು ಶಸ್ತ್ರಾಸ್ತ್ರ ಪೂರೈಸಲು ಸಹಾಯವಾಗಲೆಂದು ಆ್ಯಪ್​ ಅಭಿವೃದ್ಧಿ ಪಡಿಸುತ್ತಿದ್ದ ಬೆಂಗಳೂರಿನ ವೈದ್ಯ ಡಾ. ಅಬ್ದುಲ್​ ರೆಹಮಾನ್​ ಎಂಬಾತನನ್ನು ಇತ್ತೀಚೆಗೆ ಎನ್​ಐಎ ಅಧಿಕಾರಿಗಳು ಬಂಧಿಸಿದ್ದರು. ಆತನನ್ನು ವಿಚಾರಣೆ ಮಾಡಿದಾಗ ಕೆಲವು ಮಹತ್ವದ ಮಾಹಿತಿಗಳು ಲಭ್ಯವಾಗಿದ್ದವು.

ಬಂಧಿತ ಆರೋಪಿಗಳ ಕೆಲವು ಸಹಚರರು ಐಸಿಸ್​ ಸೇರಲು 2013-14ರಲ್ಲಿ ಸಿರಿಯಾಕ್ಕೆ ಪ್ರಯಾಣ ಬೆಳೆಸುವಾಗ ಇವರಿಬ್ಬರೂ ಹಣ ಒದಗಿಸಿದ್ದರು. ಅಬ್ದುಲ್ ಮತ್ತು ಇರ್ಫಾನ್​ ಹಿಜ್ಬ್-ಉಟ್-ತೆಹ್ರಿರ್ ಸಂಘಟನೆಯ ಸದಸ್ಯರಾಗಿದ್ದು, ಉಗ್ರಸಂಘಟನೆಗೆ ಯುವಕರನ್ನು ಸೆಳೆಯಲು 'ಖುರಾನ್ ಸರ್ಕಲ್'​ ರಚಿಸಿಕೊಂಡಿದ್ದಾರೆ ಎಂಬಿತ್ಯಾದಿ ವಿಚಾರಗಳು ಡಾ. ರೆಹಮಾನ್​ನಿಂದ ತಿಳಿದುಬಂದಿದೆ ಎಂದು ತನಿಖಾ ದಳ ಮಾಹಿತಿ ನೀಡಿದೆ.

ಇಬ್ಬರನ್ನೂ ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರುಪಡಿಸಲಾಗಿತ್ತು. ಸದ್ಯ ಶಂಕಿತ ಉಗ್ರರನ್ನು 10 ದಿನಗಳ ಎನ್​ಐಎ ಕಸ್ಟಡಿಗೆ ವಹಿಸಿ, ಕೋರ್ಟ್ ಆದೇಶ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net