

ಬೆಂಗಳೂರು: ಆರ್‌ಸಿಬಿ ಕ್ರಿಕೆಟ್ ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ತನಿಖೆಯಲ್ಲಿ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗದ ಮಧ್ಯೆ ಪ್ರವೇಶಕ್ಕೆ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಮೊರೆಯಿಟ್ಟಿದ್ದಾರೆ.
ಆಯೋಗದ ರಾಷ್ಟ್ರೀಯ ಅಧ್ಯಕ್ಷರಿಗೆ ಈ ಕುರಿತು ಪತ್ರ ಬರೆದಿರುವ ಅವರು, ಪಾರದರ್ಶಕ ತನಿಖೆ ಹಾಗೂ ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸಲು ಆಯೋಗದ ಮೇಲ್ವಿಚಾರಣೆ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿ ಸರಿಯಾಗಿ ನಿರ್ವಹಿಸಿಲ್ಲ. ಭದ್ರತೆಗೆ ಸಮಸ್ಯೆಯಾಗಲಿದೆ ಎಂದು ಪೊಲೀಸ್ ಇಲಾಖೆ ಮುಂಚಿತವಾಗಿ ತಿಳಿಸಿದ್ದರೂ ಸ್ಪಂದಿಸಿಲ್ಲ. ಜನರ ಸುರಕ್ಷತೆ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತದೆ ಎಂದಿದ್ದಾರೆ.
ಈ ಪ್ರಕರಣದಲ್ಲಿ ಎ್ಐಆರ್‌ಗಳು ದಾಖಲಾಗಿ ತನಿಖೆ ನಡೆಸಲಾಗುತ್ತಿದೆ. ಆದರೆ ಸರ್ಕಾರ ಹಾಗೂ ಸರ್ಕಾರಿ ಸಂಸ್ಥೆಗಳು ಯಾವುದೇ ಸಿದ್ಧತೆ ಮಾಡಿಕೊಳ್ಳದಿರುವುದು ಕಂಡು ಬಂದಿದೆ. ಕಾರ್ಯಕ್ರಮಕ್ಕೆ ಬಂದವರು ಹೆಚ್ಚಿನವರು ಯುವಜನರೇ ಆಗಿದ್ದರು. ಅವರ ಸುರಕ್ಷತೆ ಹಾಗೂ ಬದುಕುವ ಹಕ್ಕು ಕಿತ್ತುಕೊಂಡಂತಾಗಿದೆ ಎಂದು ಆರ್.ಅಶೋಕ್ ಹೇಳಿದ್ದಾರೆ.
ಅಗತ್ಯ ಸುರಕ್ಷತಾ ಕ್ರಮಕೈಗೊಂಡು ದುರಂತ ತಪ್ಪಿಸಲು ಸಾಧ್ಯವಿತ್ತು. ಆದರೆ ಸರ್ಕಾರದ ನಿರ್ಲಕ್ಷ್ಯ, ಸುರಕ್ಷತೆ ಕೊರತೆ ದುರ್ಘಟನೆಗೆ ಕಾರಣವಾಗಿದೆ. ದುರಂತದ ಬಗ್ಗೆ ಸ್ವಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಬೇಕು ಎಂದು ಕೋರಿದ್ದಾರೆ.
ಇಲಾಖೆಗಳು, ಅಧಿಕಾರಿಗಳು ಹಾಗೂ ಖಾಸಗಿ ಸಂಸ್ಥೆಗಳ ಜವಾಬ್ದಾರಿ, ಅವರ ಪಾತ್ರದ ಬಗ್ಗೆ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ ತನಿಖೆ ನಡೆಸಿ, ತಪ್ಪಿತಸ್ಥರನ್ನು ಹಚ್ಚಿ ಹೊಣೆಗಾರಿಕೆ ಗುರುತಿಸಬೇಕು. ಕಾನೂನು ಪ್ರಕಾರ ಕ್ರಮವಹಿಸಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಆರ್.ಅಶೋಕ್ ಬರೆದ ಪತ್ರದಲ್ಲಿ ವಿನಂತಿಸಿದ್ದಾರೆ.