

NHAI: ಉತ್ತರ ಪ್ರದೇಶದ ಮೀರತ್ನ ಭುನಿ ಟೋಲ್ ಬೂತ್ನಲ್ಲಿ ರಜೆ ಮುಗಿಸಿ ವಾಪಸ್ ಕಾಶ್ಮೀರಕ್ಕೆ ತೆರಳುತ್ತಿದ್ದ ಯೋಧನೊಬ್ಬನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ಸೋಮವಾರ ಟೋಲ್ ಸಂಗ್ರಹ ಸಂಸ್ಥೆಗೆ 20 ಲಕ್ಷ ರೂ. ದಂಡ ವಿಧಿಸಿದೆ ಎಂದು ವರದಿಯಾಗಿದೆ.
ಜೊತೆಗೆ ಟೋಲ್ ಪ್ಲಾಜಾ ಟೆಂಡರ್ಗಳಲ್ಲಿ ಟೋಲ್ ಸಂಗ್ರಹ ಸಂಸ್ಥೆಯನ್ನು ಭವಿಷ್ಯದಲ್ಲಿ ಭಾಗವಹಿಸುವುದರಿಂದ ರದ್ದುಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು NHAI ತಿಳಿಸಿದೆ ವರದಿಗಳು ಉಲ್ಲೇಖಿಸಿವೆ.
ಆಗಸ್ಟ್ 17 ರಂದು NH-709A ನ ಮೀರತ್-ಕರ್ನಾಲ್ ವಿಭಾಗದ ಭುನಿ ಟೋಲ್ ಬೂತ್ನಲ್ಲಿ ನಿಯೋಜಿಸಲಾದ ಸಿಬ್ಬಂದಿ, ಸೇನಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ಜಗಳಕ್ಕೆ ಕಾರಣವಾಯಿತು. ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಮತ್ತು ಸಿಬ್ಬಂದಿ ಶಿಸ್ತನ್ನು ಖಚಿತಪಡಿಸಿಕೊಳ್ಳಲು ಸಂಸ್ಥೆ ವಿಫಲವಾದ ಕಾರಣ ಒಪ್ಪಂದದ ಗಂಭೀರ ಉಲ್ಲಂಘನೆಯನ್ನು ಗಮನದಲ್ಲಿಟ್ಟುಕೊಂಡು ಟೋಲ್ ಸಂಗ್ರಹಣಾ ಸಂಸ್ಥೆ ಮೆಸರ್ಸ್ ಧರಂ ಸಿಂಗ್ ಅವರಿಗೆ 20 ಲಕ್ಷ ರೂ. ದಂಡ ವಿಧಿಸಿದೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಎಫ್ಐಆರ್ ದಾಖಲಿಸಿ ಆರು ಜನರನ್ನು ಬಂಧಿಸಿದ್ದಾರೆ.
ಟೋಲ್ ಪ್ಲಾಜಾ ಸಿಬ್ಬಂದಿಯ ವರ್ತನೆಯನ್ನು NHAI ಬಲವಾಗಿ ಖಂಡಿಸುತ್ತದೆ. ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುರಕ್ಷಿತ ಮತ್ತು ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ಹೇಳಿದೆ.
ಘಟನೆಯ ಹಿನ್ನೆಲೆ
ಕಪಿಲ್ ಕವದ್ ಭಾರತೀಯ ಸೇನೆಯ ಯೋಧ ರಜಪೂತ್ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಜೆಯ ನಿಮಿತ್ತ ಮನೆಗೆ ಬಂದಿದ್ದ ಅವರು ಮತ್ತೆ ಶ್ರೀನಗರದಲ್ಲಿರುವ ತಮ್ಮ ಕಚೇರಿಗೆ ತೆರಳಲು ದೆಹಲಿ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದರು. ಈ ವೇಳೆ ಜನದಟ್ಟಣೆಯ ಭುನಿ ಟೋಲ್ನಲ್ಲಿ ಕಪಿಲ್ ಮತ್ತು ಅವರ ಸೋದರಸಂಬಂಧಿ ಸಿಲುಕಿಕೊಂಡರು. ವಿಮಾನಕ್ಕೆ ತಡವಾಗುವುದರ ಬಗ್ಗೆ ಆತಂಕಗೊಂಡ ಕಪಿಲ್ ಕಾರಿನಿಂದ ಇಳಿದು ಟೋಲ್ ಬೂತ್ ಸಿಬ್ಬಂದಿಯೊಂದಿಗೆ ಮಾತನಾಡಲು ಪ್ರಾರಂಭಿಸಿದ್ದಾರೆ.
ಬಳಿಕ ವಾಗ್ವಾದ ನಡೆದು ಐದು ಟೋಲ್ ಬೂತ್ ಸಿಬ್ಬಂದಿ ಕಪಿಲ್ ಮತ್ತು ಅವರ ಸೋದರಸಂಬಂಧಿಯನ್ನು ಥಳಿಸಿದ್ದಾರೆ.ಕಪಿಲ್ ಅವರನ್ನು ಕೋಲಿನಿಂದ ಹೊಡೆಯುವುದು ವೀಡಿಯೊದಲ್ಲಿ ದಾಖಲಾಗಿತ್ತು. ನಂತರ ದುಷ್ಕರ್ಮಿಗಳು ಕಪಿಲ್ ಅವರನ್ನು ಕಂಬಕ್ಕೆ ಕಟ್ಟಿ, ಕೈಗಳನ್ನು ಹಿಂದಕ್ಕೆ ಎಳೆದು ನಿಂದಿಸಿ ಥಳಿಸಿದ್ದಾರೆ. (ಏಜೆನ್ಸೀಸ್)