ವೇಗದ ಮತ್ತು ಸ್ಪರ್ಧಾತ್ಮಕ ಜೀವನದಲ್ಲಿ ಮಾನಸಿಕ ಒತ್ತಡ ದೊಡ್ಡವರನ್ನಷ್ಟೇ ಅಲ್ಲ, ಚಿಕ್ಕ ಮಕ್ಕಳನ್ನೂ ಕಾಡುತ್ತಿದೆ. ಪರೀಕ್ಷೆ ಭಯ, ಫಲಿತಾಂಶದ ಆತಂಕ, ಶಾಲೆ- ಕಾಲೇಜುಗಳಲ್ಲಿ ಮತ್ತು ಮನೆಗಳಲ್ಲಿ ಓದುವ ಒತ್ತಡಗಳ ನಡುವೆ ಮಕ್ಕಳು ಬಡವಾಗುತ್ತಿದ್ದಾರೆ. ಜತೆಗೆ 4-5ನೇ ತರಗತಿ ಮಕ್ಕಳೂ ಆತ್ಮಹತ್ಯೆಯಂತಹ ನಿರ್ಧಾರ ಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿಯೇ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಹಾಗೂ ಸಮುದಾಯ ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಅಗತ್ಯವನ್ನು ಗುರುತಿಸಿ, ತಂತ್ರಜ್ಞಾನ ಸಂಸ್ಥೆ ಟೆಕಿಯಾನ್ ಮತ್ತು ಸರ್ಕಾರೇತರ ಸಂಸ್ಥೆಯಾದ ‘ಮೈಂಡ್ ಅಂಡ್ ಮ್ಯಾಟರ್ ಜೊತೆಗೆ ಸಹಭಾಗಿತ್ವ ಮಾಡಿಕೊಂಡಿದ್ದು, ಈ ವರ್ಷ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಉದ್ದೇಶ ಹೊಂದಿದೆ. “ತನ್ನದೇ ಆದ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮ ‘ಟೆಕಿಯಾನ್ ಫಾರ್ ಗುಡ್’ ಅಡಿಯಲ್ಲಿ ಈ ಸಹಭಾಗಿತ್ವವು ಮಾನಸಿಕ ಆರೋಗ್ಯದ ಬಗ್ಗೆ ಇರುವ ಕಳಂಕವನ್ನು ದೂರ ಮಾಡುವ ಉದ್ದೇಶದೊಂದಿಗೆ, ನಗರ ಹಾಗೂ ಗ್ರಾಮೀಣ ಪ್ರದೇಶಗಳ ಹಿಂದುಳಿದ ಸಮುದಾಯಗಳಿಗೆ ಉನ್ನತ ಗುಣಮಟ್ಟದ ಮಾನಸಿಕ ಆರೋಗ್ಯ ಸಂಪನ್ಮೂಲಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಲಿದೆ. “ಮಾನಸಿಕ ಆರೋಗ್ಯವನ್ನು ನಮ್ಮ ಸಮಾಜದ ಅವಿಭಾಜ್ಯ ಭಾಗವಾಗಿ ಸಾಮಾನ್ಯವಾಗಿ ಸ್ವೀಕರಿಸುವುದು ಅಗತ್ಯ,” ಎಂದು ಮೈಂಡ್ ಅಂಡ್ ಮ್ಯಾಟರ್ ಸಂಸ್ಥಾಪಕಿ ದೀಪಿಕಾ ಅಪ್ಪಯ್ಯ ಹೇಳಿದರು.