

ಜಲಂಧರ್ (ಪಂಜಾಬ್): ಟ್ರಾಫಿಕ್ ನಿಯಮ ಉಲ್ಲಂಘಿಸಿ ಎರ್ರಾಬಿರ್ರಿ ವಾಹನ ಓಡಿಸುವ ಸಂದರ್ಭದಲ್ಲಿ, ಅಂಥವರನ್ನು ತಡೆಯಲು ಬಂದ ಪೊಲೀಸ್ ಅಧಿಕಾರಿಗಳ ಮೇಲೆ ವಾಹನ ಹತ್ತಿಸಿರುವ ಘಟನೆಗಳು ಅಲ್ಲಲ್ಲಿ ಕೇಳುತ್ತಲೇ ಇರುತ್ತೇವೆ. ಇಂಥ ಸಮಯದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸರು ಅದೆಷ್ಟೋ ಮಂದಿ!
ಲಾಕ್ಡೌನ್ ಸಮಯದಲ್ಲಿಯೂ, ಇಂಥದ್ದೊಂದು ಘಟನೆ ನಡೆದಿದೆ. ಆದರೆ ಅದೃಷ್ಟವಶಾತ್ ಪೊಲೀಸ್ ಅಧಿಕಾರಿಗೆ ಪ್ರಾಣಕ್ಕೆ ಅಪಾಯವೇನೂ ಆಗಲಿಲ್ಲ. ಆದರೆ ಪೊಲೀಸ್ ಅಧಿಕಾರಿ ಆಯತಪ್ಪಿ ಕಾರಿನ ಬಾನೆಟ್ ಮೇಲೆ ಬಿದ್ದುದರಿಂದ, ಈ ಆಸಾಮಿ ಹಾಗೆಯೇ ಕಾರುನ್ನು ಚಲಾಯಿಸಿಕೊಂಡು ಹೋಗಿದ್ದಾನೆ!
ಇದು ನಡೆದದ್ದು ಪಂಜಾಬ್ನ ಜಲಂಧರ್ನಲ್ಲಿ. ಇಂಥ ಕುಕೃತ್ಯ ಎಸಗಿದವರು 20 ವರ್ಷದ ಅನ್ಮೋಲ್ ಮೆಹ್ಮಿ. ಈತ ಲಾಕ್ಡೌನ್ ನಿಯಮ ಉಲ್ಲಂಘಿಸಿ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ. ಕಾರನ್ನು ತಪಾಸಣೆ ನಿಟ್ಟಿನಲ್ಲಿ ಕಾರನ್ನು ನಿಲ್ಲಿಸುವಂತೆ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಮುಲ್ಕ್ ರಾಜ್ ಸೂಚಿಸಿದ್ದಾರೆ. ಆದರೆ ನಿಯಮ ಉಲ್ಲಂಘಿಸಿ ಹೋಗುತ್ತಿದ್ದುದರಿಂದಲೋ ಏನೋ ಅನ್ಮೋಲ್ ಕಾರು ನಿಲ್ಲಿಸದೆ ಓಡಿಸುತ್ತಲೇ ಇದ್ದ.
ಆಗ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಕಾರಿನ ಮುಂದಕ್ಕೆ ಬರುತ್ತಿದ್ದಂತೆಯೇ ವಾಹನ ಮುಂದೆ ಹೋಗಿದ್ದರಿಂದ ಅವರು ಜಿಗಿದು ಬಿಟ್ಟರು. ಆಯ ತಪ್ಪಿ ಬಾನೆಟ್ ಮೇಲೆ ಬಿದ್ದರು. ಇಷ್ಟಾದರೂ ಸುಮ್ಮನಾಗದ ಯುವಕ, ಸ್ವಲ್ಪ ದೂರದವರೆಗೆ ಚಾಲಕ ಪೊಲೀಸ್ ಅಧಿಕಾರಿ ಸಹಿತ ಮುಂದೆ ಸಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಚಾಲಕನನ್ನು ಬಂಧಿಸಲಾಗಿದೆ. ಜತೆಗೆ ಕಾರಿನ ಮಾಲೀಕನಾಗಿರುವ ಯುವಕನ ತಂದೆಯನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)