ಮಕ್ಕಳ ಜ್ಞಾನ ವೃದ್ಧಿಗೆ ದಿನಪತ್ರಿಕೆಗಳು ಸಹಕಾರಿ

4 nrp 3
ಎನ್.ಆರ್.ಪುರ ತಾಲೂಕು ಕ.ಸಾ.ಪ ಮಹಿಳಾ ಘಟಕದ ವತಿಯಿಂದ ನಡೆದ ಶ್ರಾವಣ ಸಂಭ್ರಮ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಯಡಗೆರೆ ಮಂಜುನಾಥ್ ಉಪನ್ಯಾಸ ನೀಡಿದರು.
Published on

ಎನ್.ಆರ್.ಪುರ: ರಾಜ್ಯಮಟ್ಟದ ಕನ್ನಡ ದಿನ ಪತ್ರಿಕೆಗಳು ಲಾಭ ಮಾಡುವುದಕ್ಕಿಂತ ಸೇವಾ ಮನೋಭಾವದಿಂದ ದಿನ ಪತ್ರಿಕೆಗಳನ್ನು ಮನೆ, ಮನೆಗೆ ತಲುಪಿಸುತ್ತಿದೆ ಎಂದು ಹಿರಿಯ ಪತ್ರಕರ್ತ ಯಡಗೆರೆ ಮಂಜುನಾಥ್ ತಿಳಿಸಿದರು.
ಶುಕ್ರವಾರ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ತಾಲೂಕು ಕಸಾಪ ಮಹಿಳಾ ಘಟಕದ ಆಶ್ರಯದಲ್ಲಿ ಸಾಮಾಜಿಕ ಗುರುವಾರ ನಡೆದ ಶ್ರಾವಣ ಸಂಭ್ರಮ ಕಾರ್ಯದಡಿ ದಿನ ಪತ್ರಿಕೆಗಳ ಮಹತ್ವ ಕುರಿತು ಮಾತನಾಡಿ, ನೂರಾರು ಟಿವಿ ಚಾನಲ್,ಯೂಟ್ಯೂಬ್‌ಗಳಿದ್ದರೂ ಸುದ್ದಿಯಲ್ಲಿ ನಿಖರತೆ, ರಾಜ್ಯ,ರಾಷ್ಟ, ಜಿಲ್ಲೆ ಹಾಗೂ ತಾಲೂಕುಗಳ ಸುದ್ದಿಗಳನ್ನು ಕ್ರೋಢಿಕರಿಸಿ 12 ಪುಟಗಳಲ್ಲಿ ಕಡಿಮೆ ಬೆಲೆಗೆ ನೀಡುತ್ತಿರುವುದೇ ಇದಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಿಂದಲೇ ದಿನ ಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು.ಇದರಿಂದ ಸಾಮಾನ್ಯ ಜ್ಞಾನ ಸಿಗಲಿದೆ. ಸ್ಥಳೀಯ ಸುದ್ದಿ ಜತೆಗೆ ರಾಜ್ಯಮಟ್ಟದ ಸುದ್ದಿಗಳು ಪ್ರತಿದಿನ ಸಿಗಲಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಎನ್.ಆರ್.ಪುರದ ಪತ್ರಕರ್ತರು ಸಮಾಜಮುಖಿಯಿಂದ ಕಾರ್ಯ ನಿರ್ವಹಿಸುತ್ತಾರೆ. ಪ್ರತಿಯೊಬ್ಬರೂ ದಿನ ಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭಾಷೆ,ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಬೆಳೆಸುತ್ತಿದೆ ಎಂದರು.
ಕಾಲೇಜು ಪ್ರಾಚಾರ್ಯೆ ಸರಸ್ವತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,25 ವರ್ಷದ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಈಗ ಅತಿ ಕಡಿಮೆ ಬೆಲೆಗೆ ದಿನ ಪತ್ರಿಕೆಗಳು ಸಿಗುತ್ತಿದೆ. ದಿನ ಪತ್ರಿಕೆಗಳಲ್ಲಿ ಪ್ರತಿ ದಿನ ಒಂದೊಂದು ವಿಷಯಕ್ಕೆ ಸಂಬಂಧಪಟ್ಟ ಪುರವಣಿಯಲ್ಲಿ ಕ್ರೀಡೆ, ವಿಜ್ಞಾನ, ಸಿನಿಮಾ ಪುಟ,ಷೇರು ಮಾರುಕಟ್ಟೆಯಿಂದ ಹಿಡಿದು ಬೆಳೆಗಳ ಬೆಲೆಯೂ ಸಹ ಸಿಗಲಿದೆ. ವಿದ್ಯಾರ್ಥಿಗಳು ಓದುವ, ಬರೆಯುವ ಅಭ್ಯಾಸ ರೂಡಿಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ ಮಾತನಾಡಿ, ಇಂದು ತಂತ್ರಜ್ಞಾನದ ಯುಗವಾಗಿದ್ದು ಮೊಬೈಲ್ ಮೂಲಕ ಅಂಗೈಯಲ್ಲೇ ಪ್ರಪಂಚ ನೋಡಬಹುದು.ಆದರೆ, ಪ್ರತಿ ದಿನ ಪತ್ರಿಕೆ ಓದಿದರೆ ಅದರಲ್ಲಿ ಜ್ಞಾನದ ಜತೆಗೆ ನಿಖರ ಸುದ್ದಿಗಳು ಸಿಗಲಿದೆ. ಕಡ್ಡಾಯವಾಗಿ ಮಕ್ಕಳು ದಿನ ಪತ್ರಿಕೆಗಳನ್ನು ಓದಬೇಕು ಎಂದು ಸಲಹೆ ನೀಡಿದರು.
ಇನ್ನರ್‌ವೀಲ್ ಸಂಸ್ಥೆ ಅಧ್ಯಕ್ಷೆ ರಶ್ಮಿದಯಾನಂದ್,ಪಪಂ ಸದಸ್ಯೆ ಜುಬೇದ, ತಾಲೂಕು ಕಸಾಪ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶಶಿಕಲಾ,ವಸಂತಿ, ಸಹ ಕಾರ್ಯದರ್ಶಿ ಭಾನುಮತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net