ಪತ್ರಿಕೆ ವಿತರಣೆಯ ಉದ್ಯೋಗ ನೀಡಿದ ಯುವಕ

Gandhi_Bazaar (1)
Published on

ಎಲ್ಲರೂ ಬೆಳಗಿನ ಜಾವದ ಸವಿನಿದ್ರೆಯಲ್ಲಿ ಇರುವಾಗ ತಾವು ಮಾತ್ರ ಚಳಿ-ಮಳೆ ಲೆಕ್ಕಿಸದೆ ಮನೆಮನೆಗೆ ದಿನಪತ್ರಿಕೆಗಳನ್ನು ತಲುಪಿಸುವ ಶ್ರಮಜೀವಿಗಳು ಪತ್ರಿಕಾ ವಿತರಕರು. ಜಗತ್ತಿಗೆಲ್ಲ ವಾರಾಂತ್ಯ, ಹಬ್ಬ, ಹರಿದಿನಗಳೆಂಬ ಹತ್ತು-ಹಲವು ರಜೆ ಸಿಕ್ಕರೂ, ಇವರದು ಮಾತ್ರ ವರ್ಷ ಪೂರ್ತಿ ಬಿಡುವೇ ಇಲ್ಲದ

ಕಾಯಕ. ವಿತರಕರಿಲ್ಲದೆ ದಿನಪತ್ರಿಕೆಗಳಿಲ್ಲ ಎಂಬಷ್ಟರ ಮಟ್ಟಿಗೆ ಪತ್ರಿಕಾ ವ್ಯವಸ್ಥೆಗೆ ಇವರು ಅನಿವಾರ್ಯ ಬೆನ್ನೆಲುಬು. ಏಕೆಂದರೆ, ಪತ್ರಿಕೆಗಳನ್ನು ಎಷ್ಟು ಒಪ್ಪ-ಓರಣವಾಗಿ ಸಿದ್ಧಪಡಿಸಿದ ಬಳಿಕವೂ ಅದನ್ನು ಓದುಗರ ಮನೆಬಾಗಿಲಿಗೆ ತಲುಪಿಸುವ ಆಪದ್ಬಾಂಧವರು ಇವರೇ. ಮನೆಯಲ್ಲಿ ಮದುವೆ ಇರಲಿ, ಸೂತಕವಿರಲಿ, ವಿತರಕರು ಯಾವತ್ತೂ ತಮ್ಮ ಕಾಯಕ ತಪ್ಪಿಸುವವರಲ್ಲ. ಕರೊನಾ ಸಂಕಷ್ಟದ ಸಂದರ್ಭ ಇಡೀ ದೇಶವೇ ಲಾಕ್​ಡೌನ್ ಆಗಿದ್ದಾಗಲೂ ಮನೆ-ಮನೆಗೆ ಪತ್ರಿಕೆ ತಲುಪಿಸಿದ ವಾರಿಯರ್ಸ್ ಇವರು. ಶುಕ್ರವಾರ (ಸೆ.4) ಪತ್ರಿಕಾ ವಿತರಕರ ದಿನ. ಈ ಹಿನ್ನೆಲೆಯಲ್ಲಿ ಪತ್ರಿಕಾ ವಿತರಣೆಗೇ ತಮ್ಮ ಜೀವನ ಸಮರ್ಪಿಸಿಕೊಂಡು, ಹತ್ತಾರು ಮಂದಿಗೆ ಉದ್ಯೋಗದಾತರಾಗಿರುವ, ಈ ವೃತ್ತಿಯಿಂದಲೇ ಉತ್ತಮ ಬದುಕು ಕಟ್ಟಿಕೊಂಡು ಮಾದರಿ ಆಗಿರುವ ವಿತರಕ ಬಂಧುಗಳ ಯಶೋಗಾಥೆಯನ್ನು ನಾಡಿಗೆ ಪರಿಚಯಿಸುವ ಕಿರು ಪ್ರಯತ್ನ ಇಲ್ಲಿದೆ. ವಿಜಯವಾಣಿಯ ಎಲ್ಲ ವಿತರಕ ಬಾಂಧವರಿಗೆ ಪತ್ರಿಕಾ ವಿತರಕರ ದಿನ ಶುಭಾಶಯಗಳು.
ವೀರೇಂದ್ರ ಗೋಕಾಕ

‘ಪ್ರೌಢಶಿಕ್ಷಣಕ್ಕೆ ಹಣ ಹೊಂದಿಸಲಿಕ್ಕಾಗಿ 8ನೇ ತರಗತಿಯಲ್ಲೇ ದಿನಪತ್ರಿಕೆ ವಿತರಣೆ ಆರಂಭಿಸಿದೆ. ಅಂದಿನಿಂದ 25 ವರ್ಷ ಶ್ರದ್ಧೆಯಿಂದ ಈ ಕೆಲಸ ಮಾಡುತ್ತಿದ್ದೇನೆ. ದಿನಪತ್ರಿಕೆ, ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳ ಮಾರಾಟಕ್ಕಾಗಿ 2 ಮಳಿಗೆ ತೆರೆದಿದ್ದು, 7 ಮಹಿಳೆಯರು ಸೇರಿ 20 ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿದ್ದೇನೆ. ಈ ಕೆಲಸದಲ್ಲಿ ನನಗೆ ಸಂತೃಪ್ತಿ ಸಿಕ್ಕಿದೆ’. ಇದು ಬೆಳಗಾವಿ ಜಿಲ್ಲೆ ಗೋಕಾಕದ ದಿನಪತ್ರಿಕೆ ವಿತರಕ ವೀರೇಂದ್ರ ದುಂಡಪ್ಪ ಕಿತ್ತೂರ ಅವರ ಮನದಾಳದ ಮಾತು. ಒಂಬತ್ತು ವರ್ಷಗಳ ಹಿಂದೆ ನನ್ನ ತಾಯಿ ವಿಲಾಸಮತಿ ಮೃತಪಟ್ಟರು. ರಾತ್ರಿಯೇ ಅವರ ಅಂತ್ಯಕ್ರಿಯೆ ನೆರವೇರಿಸಿ, ಮಾರನೇ ದಿನ ಬೆಳಗ್ಗೆ ಎಂದಿನಂತೆ ದಿನಪತ್ರಿಕೆ ವಿತರಿಸಲು ಬಂದಿದ್ದೆ. ಶ್ರಮಪಟ್ಟ ಪರಿಣಾಮ ಸ್ವಂತ ಮನೆ ಕಟ್ಟಿಕೊಂಡಿದ್ದು, ನಿವೇಶನವನ್ನೂ ಖರೀದಿಸಿದ್ದೇನೆ ಎನ್ನುತ್ತಾರೆ 39ರ ಹರೆಯದ ವೀರೇಂದ್ರ. ‘ನನ್ನ ಬಳಿ ಕೆಲಸ ಮಾಡುತ್ತಿರುವ 13 ಜನರು ಮನೆ-ಮನೆಗೆ ತೆರಳಿ, ದಿನಪತ್ರಿಕೆ ವಿತರಿಸುತ್ತಾರೆ. ಏಳು ಮಹಿಳೆಯರು ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳ ಮಾರಾಟದ ಜತೆ, ದಿನಪತ್ರಿಕೆ ಬಿಲ್ ವಸೂಲಿ ಮಾಡುತ್ತಾರೆ. ‘ವಿಜಯವಾಣಿ’ ದಿನಪತ್ರಿಕೆಯೂ ಸೇರಿ ವಿವಿಧ ದಿನಪತ್ರಿಕೆಗಳ 3 ಸಾವಿರ ಪ್ರತಿಗಳನ್ನು ನಿತ್ಯವೂ ಓದುಗರ ಮನೆಗೆ ತಲುಪಿಸುತ್ತೇವೆ’ ಎಂದು ಸಂತಸದಿಂದ ಹೇಳುತ್ತಾರೆ ವೀರೇಂದ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net