ಪತ್ರಿಕೆಗಳೇ ಕೈಹಿಡಿದವು

Hanumanthanagar (11)
Published on

ಎಲ್ಲರೂ ಬೆಳಗಿನ ಜಾವದ ಸವಿನಿದ್ರೆಯಲ್ಲಿ ಇರುವಾಗ ತಾವು ಮಾತ್ರ ಚಳಿ-ಮಳೆ ಲೆಕ್ಕಿಸದೆ ಮನೆಮನೆಗೆ ದಿನಪತ್ರಿಕೆಗಳನ್ನು ತಲುಪಿಸುವ ಶ್ರಮಜೀವಿಗಳು ಪತ್ರಿಕಾ ವಿತರಕರು. ಜಗತ್ತಿಗೆಲ್ಲ ವಾರಾಂತ್ಯ, ಹಬ್ಬ, ಹರಿದಿನಗಳೆಂಬ ಹತ್ತು-ಹಲವು ರಜೆ ಸಿಕ್ಕರೂ, ಇವರದು ಮಾತ್ರ ವರ್ಷ ಪೂರ್ತಿ ಬಿಡುವೇ ಇಲ್ಲದ

ಕಾಯಕ. ವಿತರಕರಿಲ್ಲದೆ ದಿನಪತ್ರಿಕೆಗಳಿಲ್ಲ ಎಂಬಷ್ಟರ ಮಟ್ಟಿಗೆ ಪತ್ರಿಕಾ ವ್ಯವಸ್ಥೆಗೆ ಇವರು ಅನಿವಾರ್ಯ ಬೆನ್ನೆಲುಬು. ಏಕೆಂದರೆ, ಪತ್ರಿಕೆಗಳನ್ನು ಎಷ್ಟು ಒಪ್ಪ-ಓರಣವಾಗಿ ಸಿದ್ಧಪಡಿಸಿದ ಬಳಿಕವೂ ಅದನ್ನು ಓದುಗರ ಮನೆಬಾಗಿಲಿಗೆ ತಲುಪಿಸುವ ಆಪದ್ಬಾಂಧವರು ಇವರೇ. ಮನೆಯಲ್ಲಿ ಮದುವೆ ಇರಲಿ, ಸೂತಕವಿರಲಿ, ವಿತರಕರು ಯಾವತ್ತೂ ತಮ್ಮ ಕಾಯಕ ತಪ್ಪಿಸುವವರಲ್ಲ. ಕರೊನಾ ಸಂಕಷ್ಟದ ಸಂದರ್ಭ ಇಡೀ ದೇಶವೇ ಲಾಕ್​ಡೌನ್ ಆಗಿದ್ದಾಗಲೂ ಮನೆ-ಮನೆಗೆ ಪತ್ರಿಕೆ ತಲುಪಿಸಿದ ವಾರಿಯರ್ಸ್ ಇವರು. ಶುಕ್ರವಾರ (ಸೆ.4) ಪತ್ರಿಕಾ ವಿತರಕರ ದಿನ. ಈ ಹಿನ್ನೆಲೆಯಲ್ಲಿ ಪತ್ರಿಕಾ ವಿತರಣೆಗೇ ತಮ್ಮ ಜೀವನ ಸಮರ್ಪಿಸಿಕೊಂಡು, ಹತ್ತಾರು ಮಂದಿಗೆ ಉದ್ಯೋಗದಾತರಾಗಿರುವ, ಈ ವೃತ್ತಿಯಿಂದಲೇ ಉತ್ತಮ ಬದುಕು ಕಟ್ಟಿಕೊಂಡು ಮಾದರಿ ಆಗಿರುವ ವಿತರಕ ಬಂಧುಗಳ ಯಶೋಗಾಥೆಯನ್ನು ನಾಡಿಗೆ ಪರಿಚಯಿಸುವ ಕಿರು ಪ್ರಯತ್ನ ಇಲ್ಲಿದೆ. ವಿಜಯವಾಣಿಯ ಎಲ್ಲ ವಿತರಕ ಬಾಂಧವರಿಗೆ ಪತ್ರಿಕಾ ವಿತರಕರ ದಿನ ಶುಭಾಶಯಗಳು.
ಸೋಮಶೇಖರ್ ಕೊಳ್ಳೇಗಾಲ

39 ವರ್ಷಗಳಿಂದ ಕಾಲ್ನಡಿಗೆಯಲ್ಲೇ ಊರು ಸುತ್ತಿ ಮನೆಗಳಿಗೆ ಪತ್ರಿಕೆ ಹಂಚುತ್ತಿರುವ ಸೋಮಶೇಖರ್, ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮದವರು. ಜಿಲ್ಲೆಯ ಹಿರಿಯ ಪತ್ರಿಕಾ ಪ್ರತಿನಿಧಿ. ಇವರು ಜಮೀನು ಹೊಂದಿದ್ದು ಹಲವು ವರ್ಷಗಳಿಂದ ಕೃಷಿ- ಹೈನುಗಾರಿಕೆ ಮಾಡುತ್ತಿದ್ದರು. ಆದರೆ ಕೃಷಿಯಲ್ಲಿ ತುಸು ಹಿನ್ನಡೆ ಆಗಿ ಮನೆಯಲ್ಲೇ ಕೂರುವಂತಾದಾಗ ಕೈ ಹಿಡಿದದ್ದೇ ಪತ್ರಿಕೆಗಳು. 1981ರಲ್ಲಿ ಏಜೆನ್ಸಿ ಪಡೆದು ಪ್ರತಿನಿಧಿಯಾಗಿ, ಅದರ ಆದಾಯದಲ್ಲಿ ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಿಸುತ್ತಿದ್ದಾರೆ. ವರದಿಗಾರರಾಗಿಯೂ ಗುರುತಿಸಿಕೊಂಡಿರುವ ಇವರು ಆ ಕಾಲದಲ್ಲಿ ಅದರಲ್ಲೂ ಕಾಡುಗಳ್ಳ ವೀರಪ್ಪನ್​ಗೆ ಸಂಬಂಧಿಸಿದ ಸುದ್ದಿಗಳನ್ನು ಕಾಡುಮೇಡು ಅಲೆದು ಫೋನ್​ನಲ್ಲಿಯೇ ತಿಳಿಸುತ್ತಿದ್ದರು. ಈ ಭಾಗದಲ್ಲಿ ಇವರು ಇಂದಿಗೂ ಪೇಪರ್ ಸೋಮಶೇಖರ್ ಎಂದೇ ಪ್ರಸಿದ್ಧಿ. ‘ನಾನು ಹಲವು ವರ್ಷಗಳಿಂದ ಕಾಲ್ನಡಿಗೆಯಲ್ಲಿ 15 ಕಿ.ಮೀ ಸಂಚರಿಸಿ ಪತ್ರಿಕೆ ಹಂಚುತ್ತಿದ್ದೇನೆ. ಹಾಗಾಗಿಯೇ ಇನ್ನೂ ಆರೋಗ್ಯದಿಂದ ಇದ್ದೇನೆ ಎನ್ನುತ್ತಾರೆ ಸೋಮಶೇಖರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net