

ಎಲ್ಲರೂ ಬೆಳಗಿನ ಜಾವದ ಸವಿನಿದ್ರೆಯಲ್ಲಿ ಇರುವಾಗ ತಾವು ಮಾತ್ರ ಚಳಿ-ಮಳೆ ಲೆಕ್ಕಿಸದೆ ಮನೆಮನೆಗೆ ದಿನಪತ್ರಿಕೆಗಳನ್ನು ತಲುಪಿಸುವ ಶ್ರಮಜೀವಿಗಳು ಪತ್ರಿಕಾ ವಿತರಕರು. ಜಗತ್ತಿಗೆಲ್ಲ ವಾರಾಂತ್ಯ, ಹಬ್ಬ, ಹರಿದಿನಗಳೆಂಬ ಹತ್ತು-ಹಲವು ರಜೆ ಸಿಕ್ಕರೂ, ಇವರದು ಮಾತ್ರ ವರ್ಷ ಪೂರ್ತಿ ಬಿಡುವೇ ಇಲ್ಲದ
ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಯಾವುದೇ ವೃತ್ತಿ ಬದುಕು ಕಟ್ಟಿಕೊಡುತ್ತದೆ ಎನ್ನುವುದಕ್ಕೆ ಬೀದರ್ನ ಹಿರಿಯ ಪತ್ರಿಕಾ ವಿತರಕ ಚಂದ್ರಕಾಂತ ವಿ.ಬಿರಾದಾರ ನಿದರ್ಶನ. 20 ವರ್ಷಗಳಿಂದ ಪತ್ರಿಕೆ ವಿತರಣೆಯಲ್ಲಿರುವ ಇವರು ಭವಿಷ್ಯ ರೂಪಿಸಿಕೊಳ್ಳುವ ಜತೆಗೆ ಹಲವು ನಿರುದ್ಯೋಗಿಗಳಿಗೆ ಕೆಲಸ ನೀಡಿದ್ದಾರೆ. ಮೂಲತಃ ಔರಾದ್ನ ಸೋರಳ್ಳಿಯ ಚಂದ್ರಕಾಂತ ಚಿಕ್ಕ ವಯಸ್ಸಲ್ಲೇ ತಂದೆಯನ್ನು ಕಳೆದುಕೊಂಡರು. ತಾಯಿ ಗುಂಡಮ್ಮ ಕೂಲಿ ಕೆಲಸ ಮಾಡಿ, ಚಂದ್ರಕಾಂತ ಸೇರಿ ಮೂವರು ಗಂಡು ಮಕ್ಕಳಿಗೆ ಶಿಕ್ಷಣ ಕೊಡಿಸಿದರು. ಪಿಯುಸಿಗಾಗಿ ಬೀದರ್ಗೆ ಬಂದ ಚಂದ್ರಕಾಂತ, 1990ರಲ್ಲಿ ಹೊಟ್ಟೆಪಾಡಿಗಾಗಿ ಓದಿನ ಜತೆ ಪತ್ರಿಕೆ ವಿತರಣೆ ಶುರು ಮಾಡಿದರು. ಬಳಿಕ ಪೂರ್ತಿ ಇದರಲ್ಲೇ ತೊಡಗಿ ಶಿಕ್ಷಣಕ್ಕೆ ವಿದಾಯ ಹೇಳಿ, ಸಹೋದರ ವೈಜಿನಾಥ ಅವರನ್ನೂ ಈ ಕಾರ್ಯಕ್ಕೆ ಕರೆತಂದರು. ಸದ್ಯ ಬೀದರ್ ಸಿಟಿ ವಿಜಯವಾಣಿ ಏಜೆನ್ಸಿ ಪಡೆದಿರುವ ಈ ಸಹೋದರರು, ನಿತ್ಯ ವಿಜಯವಾಣಿಯ 4000 ಸೇರಿ ವಿವಿಧ ಪತ್ರಿಕೆಗಳ 6000 ಪ್ರತಿಗಳನ್ನು ವಿತರಿಸುತ್ತಿದ್ದಾರೆ. ಹದಿನೈದು ಹುಡುಗರಿಗೆ ಕೆಲಸ ಕೊಟ್ಟಿರುವ ಇವರು, ಇದೇ ಕಾರ್ಯದಿಂದ ಚನ್ನಬಸವ ಬಡಾವಣೆಯಲ್ಲಿ 2 ಪ್ರತ್ಯೇಕ ಮನೆ ನಿರ್ವಿುಸಿಕೊಂಡಿದ್ದಾರೆ.