

ಮುಂಬೈ: ಇತ್ತೀಚೆಗೆ ಹಸೆಮಣೆ ಏರಿ ದಾಂಪತ್ಯ ಜೀವನ ಆರಂಭಿಸಿದ್ದ ವೈದ್ಯೆಯೊಬ್ಬರು ತಂದೆಗೆ ಭಾವನಾತ್ಮಕ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಭೋಕರ್ದನ್ನಲ್ಲಿ ನಡೆದಿದೆ.
ಡಾ.ಪ್ರಂಜಲ್ ಜ್ಞಾನೇಶ್ವರಿ ಕೊಲ್ಹೆ(24) ಆತ್ಮಹತ್ಯೆ ಮಾಡಿಕೊಂಡಿರುವ ವೈದ್ಯೆ. ಆಕೆ ಐದು ತಿಂಗಳ ಹಿಂದೆ ವೈದ್ಯರೊಬ್ಬರ ಜತೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾಗಿ ಸಂತಸದಿಂದಲೇ ಇದ್ದ ಪ್ರಂಜಲ್ ಇದ್ದಕ್ಕಿದ್ದಂತೆ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಾರೆ. "ಅಪ್ಪಾ, ನನ್ನನ್ನು ಕ್ಷಮಿಸು. ನನ್ನ ಸಾವಿಗೆ ಯಾರನ್ನೂ ದೂಷಿಸಬೇಡ" ಎಂದು ಪತ್ರ ಬರೆದಿಟ್ಟು ಭಾನುವಾರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಅವರದ್ದೇ ನಿವಾಸದಲ್ಲಿ ಸೀರೆಯ ನೇಣಿಗೆ ಕೊರಳೊಡ್ಡಿದ್ದಾರೆ.
ವೈದ್ಯೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಆಕೆಯ ಸ್ವಗ್ರಾಮವಾದ ಬಾರಂಜಲ ಸೇಬಲ್ನಲ್ಲಿ ಭಾನುವಾರ ಸಂಜೆ ಅಂತ್ಯಸಂಸ್ಕಾರ ನಡೆಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಭೋಕರ್ದನ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. (ಏಜೆನ್ಸೀಸ್)