

ಸೂರತ್: 118 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ, ಸೇತುವೆಯೊಂದು ಉದ್ಘಾಟನೆಯಾದ 40 ದಿನಗಳಲ್ಲೇ ಬಿರುಕು ಬಿಟ್ಟಿರುವ ಘಟನೆ ಗುಜರಾತಿನ ಸೂರತ್ನಲ್ಲಿ ನಡೆದಿದೆ.
ಸೂರತ್ ನಗರದ ತಾಪಿ ನದಿಯ ಅಂಚಿನಲ್ಲಿ ಕಟ್ಟಲಾಗಿದ್ದ, ವೇದ್-ವಾರಿಯಾವ್ ಸೇತುವೆಯು ಬಾರಿ ಮಳೆಯಿಂದಾಗಿ ಬಿರುಕು ಬಿಟ್ಟಿದ್ದು, ಆಡಳಿತರೂಢ ಬಿಜಪಿಯು ವಿಪಕ್ಷಗಳಾದ ಕಾಂಗ್ರೆಸ್ ಹಾಗೂ ಎಎಪಿ ಕೆಂಗಣ್ಣಿಗೆ ಗುರಿಯಾಗಿದೆ.
ಮೇ 17ರಂದು ಉದ್ಘಾಟನೆಯಾಗಿದ್ದ, 1.5 ಕಿಲೋಮೀಟರ್ ಉದ್ದದ ಸೇತುವೆಯು ಸೂರತ್ ನಗರದಿಂದ ವೇದ್-ವಾರಿಯಾವ್ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ. ವಾರಿಯಾವ್ ಕಡೆಗೆ ಸಂಪರ್ವಕಿಸುವ ರಸ್ತೆಯಲ್ಲಿ ಬಿರುಕು ಬಿಟ್ಟಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿಲ್ಲವೆಂಬ ಕಾರಣಕ್ಕೆ ಹತ್ಯೆ
ಸ್ಥಳಕ್ಕೆ ಭೇಟಿ ನೀಡಿದ ಸೂರತ್ ನಗರ ಪಾಲಿ ವಿಪಕ್ಷ ಸದಸ್ಯ ಧರ್ಮೇಶ್ ಭಂಡೇರಿ ಉದ್ಘಾಟನೆಯಾದ 40 ದಿನಗಳಲ್ಲೇ ಬ್ರಿಡ್ಜ್ ಬಿರುಕು ಬಿಟ್ಟಿದ್ದು, ನಿರ್ಮಾಣ ಪ್ರಕ್ರಿಯೆಯಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆದಿದೆ. ಪ್ರಕರಣವನ್ನು ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಬಿಜೆಪಿ ನಾಯಕರೊಬ್ಬರ ಪರಮಾಪ್ತ ಗುತ್ತಿಗೆದಾರರಿಗೆ ಕಾಮಗಾರಿಯನ್ನು ನೀಡಿದ ಪರಿಣಾಮ ಈ ರೀತಿ ಆಗಿದೆ ಎಂದು ಆರೋಪಿಸಿದ್ದಾರೆ.
ಬ್ರಿಡ್ಜ್ ಬಿರುಕು ಬಿಟ್ಟಿರುವ ಕುರಿತು ಪ್ರತಿಕ್ರಿಯಿಸಿರುವ ಗುಜರಾತ್ ಎಎಪಿ ಘಟಕದ ಅಧ್ಯಕ್ಷ ಇಸುದಾನ್ ಗದ್ವಿ ನಿರ್ಮಾಣ ಕಾರ್ಯದ ವಿಚಾರವಾಗಿ ಬಿಜೆಪಿಯಿಂದ ವ್ಯಾಪಕವಾಗಿ ಭ್ರಷ್ಟಾಚಾರ ನಡೆದಿದ್ದು, ಇತ್ತೀಚಿಗೆ ರಾಜ್ಯಾದ್ಯಂತ ಮಳೆಯಿಂದ ಹಾನಿಗೊಳಗಾದ ಸೇತುವೆಗಳ ಕುರಿತು ವಿವರವಾದ ತನಿಖೆ ನಡೆಸಬೇಕು. ಸಿಬಿಐ ಅಥವಾ ಜಾರಿ ನಿರ್ದೇಶನಾಲಯಕ್ಕೆ ಈ ಸಂಬಂಧ ತನಿಖೆಗೆ ಅದೇಶಿಸಬೇಕು ಎಂದು ಒತ್ತಾಯಿಸಿದ್ಧಾರೆ.