ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ನವಜಾತ ಗಂಡು ಶಿಶು ಪತ್ತೆ

Newborn baby boy found
ಶ್ರೀರಾಪುರದಲ್ಲಿ ನವಜಾತ ಶಿಶುವಿದ್ದ ಕೈಚೀಲ ಮತ್ತು ಶಿಶುವಿಗೆ ಆರೈಕೆ ಮಾಡಿದ ವೃದ್ಧೆ.
Published on

ಶಿವಮೊಗ್ಗ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಕೈ ಚೀಲವೊಂದರಲ್ಲಿ ನವಜಾತ ಗಂಡು ಶಿಶು ಪತ್ತೆಯಾಗಿದ್ದು ಶಿಶುವನ್ನು ರಕ್ಷಿಸಿ ಆರೈಕೆ ಮಾಡಿರುವ ಸ್ಥಳೀಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಿದ್ದಾರೆ. ಸದ್ಯ ಮೆಗ್ಗಾನ್ ಆಸ್ಪತ್ರೆಗೆ ಶಿಶುವನ್ನು ದಾಖಲಿಸಿದ್ದು ಆರೋಗ್ಯವಾಗಿದೆ.

ಶುಕ್ರವಾರ ಬೆಳ್ಳಂಬೆಳಗ್ಗೆ ಸಾಗರ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ಶ್ರೀರಾಮಪುರದಲ್ಲಿ ಶಿಶು ಅಳುವ ಶಬ್ದ ಕೇಳಿಬರುತ್ತಿತ್ತು. ಸ್ಥಳೀಯರು ಸ್ಥಳಕ್ಕೆ ಹೋಗಿ ನೋಡಿದಾಗ ಒಂದು ದಿನದ ಹಿಂದಷ್ಟೇ ಜನಿಸಿದ ಗಂಡು ಶಿಶುವೊಂದು ಕೈಚೀಲದಲ್ಲಿ ಪತ್ತೆಯಾಗಿತ್ತು.

ವೃದ್ಧೆಯೊಬ್ಬರು ಶಿಶುವನ್ನು ರಕ್ಷಿಸಿ ಸ್ನಾನ ಮಾಡಿಸಿ ರಕ್ಷಣೆ ಮಾಡಿದ್ದಾರೆ. ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಅಧಿಕಾರಿಗಳು, ಮಕ್ಕಳ ಸಹಾಯವಾಣಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಶಿಶುವನ್ನು ಮೆಗ್ಗಾನ್ ಆಸ್ಪತ್ರೆಯ ಮಕ್ಕಳು ಮತ್ತು ಹೆರಿಗೆ ವಿಭಾಗಕ್ಕೆ ಮಗುವನ್ನು ದಾಖಲು ಮಾಡಲಾಗಿದೆ.

ಆರೈಕೆ ಮಾಡಿದ ವೃದ್ಧೆ: ರಸ್ತೆ ಬದಿ ಬೋರ್‌ವಲ್ ಪೈಪ್ ಪಕ್ಕದಲ್ಲಿ ಬಿಟ್ಟು ಹೋಗಿದ್ದ ಶಿಶುವನ್ನು ಎತ್ತಿಕೊಂಡ ವೃದ್ಧೆಯೊಬ್ಬರು ಚಳಿಯಲ್ಲಿ ನಡುಗುತ್ತಿದ್ದನ್ನು ಗಮನಿಸಿ ತಕ್ಷಣವೇ ಆರೈಕೆ ಮಾಡಿದ್ದಾರೆ. ಶಿಶುವಿಗೆ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿ ಚಳಿ ಆಗದಂತೆ ಮಪ್ಲರ್ ಕಟ್ಟಿದ್ದಾರೆ. ಪಂಚೆಯಲ್ಲಿ ಸುತ್ತಿ ಅದಕ್ಕೊಂದು ಸಣ್ಣ ಬಟ್ಟೆಯನ್ನೂ ಹಾಕಿದ್ದಾರೆ. ತಮ್ಮ ಮಡಿಲ್ಲಲೆ ಶಿಶುವನ್ನು ಮಲಗಿಸಿಕೊಂಡು ಆರೈಕೆ ಮಾಡಿದ್ದಾರೆ. ಸದ್ಯ ಶಿಶುವನ್ನು ಬಿಟ್ಟು ಹೋದವರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು ಅನೈತಿಕ ಸಂಬಂಧಕ್ಕೆ ಜನಿಸಿದ ಶಿಶು ಇರಬೇಕೆಂಬ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net