

ಚಿತ್ರರಂಗಗಳಲ್ಲಿ ಸ್ಟಾರ್‌ವಾರ್, ಫ್ಯಾನ್ಸ್ ವಾರ್ ಸಾಮಾನ್ಯ. ಆದರೆ, ಕಾಲಿವುಡ್‌ನಲ್ಲಿ ಹೊಸ ರೀತಿಯ ಯುದ್ಧ ಪ್ರಾರಂಭವಾಗಿದೆ. ಅದೂ ನಿರ್ಮಾಪಕರು ಮತ್ತು ಸ್ಟಾರ್‌ಗಳ ನಡುವೆ! ಹೌದು, ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿರುವ ಸ್ಟಾರ್‌ಗಳು ಯಾವ ಚಿತ್ರಕ್ಕೂ ಸರಿಯಾಗಿ ಸಮಯ ನೀಡಲಾಗದೇ, ನಿರ್ಮಾಪಕರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ ಎಂದು ತಮಿಳು ನಿರ್ಮಾಪಕರು ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೆ ನಿರ್ಮಾಪಕರು, ವಿತರಕರು, ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರು ಸಭೆ ನಡೆಸಿ ಕೆಲ ನಟರನ್ನು ಬ್ಯಾನ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಜತೆಗೆ ಸಭೆಯಲ್ಲಿ ಥಿಯೇಟರ್ ಸಮಸ್ಯೆ, ನಟರ ಸಂಭಾವನೆ ಹೆಚ್ಚಳ, ಒಟಿಟಿ ಬಿಕ್ಕಟ್ಟು ಸೇರಿ ಆರು ಸಮಸ್ಯೆಗಳ ಪರಿಹಾರಕ್ಕೆ ಸಭೆ ನಿರ್ಮಾಪಕರು ಆಗ್ರಹಿಸಿದ್ದಾರೆ. ಆಗಸ್ಟ್ 16ರಿಂದ ಹೊಸ ಸಿನಿಮಾಗಳನ್ನು ೋಷಿಸದಂತೆ ಹಾಗೂ ಅ. 31ರ ಒಳಗೆ ಸೆಟ್ಟೇರಿರುವ ಸಿನಿಮಾಗಳ ಕೆಲಸ ಪೂರ್ಣಗೊಳಿಸುವಂತೆ ನಿರ್ದೇಶಿಸಲಾಗಿದೆ. ಹಾಗೇ ನ. 1ರಿಂದ ಸಿನಿಮಾ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಸೇರಿ ಎಲ್ಲ ಕೆಲಸಗಳನ್ನೂ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. -ಏಜೆನ್ಸೀಸ್
ಧನುಷ್ ಹೆಸರು ಪ್ರಸ್ತಾಪಕ್ಕೆ ವಿರೋಧ
ಸಭೆಯಲ್ಲಿ ನಟ ಧನುಷ್ ಹೆಸರನ್ನು ಪ್ರಸ್ತಾಪಿಸಿದ್ದು, ಇದು ಕಾಲಿವುಡ್‌ಅನ್ನು ಇಬ್ಭಾಗ ಮಾಡಿದೆ. ಸದ್ಯ ‘ರಾಯನ್’ ಯಶ್ಸಸಿನಲೆಯಲ್ಲಿ ಬೀಗುತ್ತಿರುವ ಧನುಷ್ ಕೈಯಲ್ಲಿ ‘ಕುಬೇರ’ ಸೇರಿ ನಾಲ್ಕೈದು ಸಿನಿಮಾಗಳಿವೆ. ಆ ಚಿತ್ರಗಳಿಗೆ ನಿರ್ಮಾಪಕರಿಂದ ಅಡ್ವಾನ್ಸ್ ಕೂಡ ಪಡೆದಿದ್ದಾರೆ. ಈ ಕಾರಣಕ್ಕಾಗಿ ಆ ಸಿನಿಮಾಗಳ ಶೂಟಿಂಗ್ ಮುಗಿಸಿಕೊಡುವರೆರೆಗೂ ಹೊಸ ಸಿನಿಮಾ ಒಪ್ಪಿಕೊಳ್ಳಬಾರದು ಎಂದು ನಿರ್ಮಾಪಕರ ಮಂಡಳಿ ಆಗ್ರಹಿಸಿದೆ. ಇದು ತಮಿಳು ಕಲಾವಿದರ ಸಂಘದ ಅಸಮಾಧಾನಕ್ಕೆ ಕಾರಣವಾಗಿದ್ದು, ನಾಡಿಗೇರ್ ಸಂಗಂನ ಖಜಾಂಚಿ, ನಟ ಕಾರ್ತಿ, ‘ಸಾಮಾನ್ಯವಾಗಿ ನಿರ್ಮಾಪಕರು ಯಾವುದೇ ತೀರ್ಮಾನಕ್ಕೆ ಬರುವ ಮುನ್ನ ಕಲಾವಿದರ ಸಂಘದ ಜತೆ ಚರ್ಚಿಸುತ್ತಿದ್ದರು. ಆದರೆ, ನಮಗೆ ತಿಳಿಸದೇ ಇದೀಗ ಧನುಷ್ ಅವರನ್ನು ಬ್ಯಾನ್ ಮಾಡುವ ಬಗ್ಗೆ ಮಾತನಾಡಿರುವುದು ತಪ್ಪು. ಶೂಟಿಂಗ್ ಸ್ಥಗಿತಗೊಳಿಸಿದರೆ ಸಾವಿರಾರು ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಸಂಕಷ್ಟ ಎದುರಿಸಬೇಕಾಗುತ್ತದೆ. ಹೀಗಾಗಿ ಎಲ್ಲ ಸಂಘಗಳೂ ಸೇರಿ ಕುಳಿತು ಚರ್ಚಿಸಿ ಈ ಬಗ್ಗೆ ಒಮ್ಮತಕ್ಕೆ ಬಂದರೆ ಉತ್ತಮ’ ಎಂದು ಹೇಳಿಕೊಂಡಿದ್ದಾರೆ.