

ನವದೆಹಲಿ: ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಮತ್ತು ಹೊಸದಾಗಿ ಚುನಾಯಿತರಾದ ಲೋಕಸಭಾ ಸಂಸದ ಕಿಂಜರಪು ರಾಮ್ ಮೋಹನ್ ನಾಯ್ಡು ಅವರು ಅಧಿಕೃತವಾಗಿ ನಾಗರಿಕ ವಿಮಾನಯಾನ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಚಿವಾಲಯದ ಅಧಿಕಾರ ವಹಿಸಿಕೊಳ್ಳುವ ಮೊದಲು ದೆಹಲಿಯ ರಾಜೀವ್ಗಾಂಧಿ ಭವನದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸುವ ಸಮಾರಂಭವನ್ನು ನಡೆಸಿದರು.
ಅಧಿಕಾರ ವಹಿಸಿಕೊಳ್ಳುವ ಮೊದಲು ಅವರು ನಿಖರವಾಗಿ ಮಧ್ಯಾಹ್ನ 1.11ಕ್ಕೆ 21 ಬಾರಿ " ಓಂ ಶ್ರೀ ರಾಮ್ " ಎಂದು ಬರೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರ ನಂತರ ಅವರು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಅವರ ತಾಯಿ ಮತ್ತು ಅವರ ಪತ್ನಿಗೆ ತಮ್ಮ ಹೊಸ ಸ್ಥಾನದ ಬಗ್ಗೆ ತಿಳಿಸಿದರು ಎನ್ನಲಾಗಿದೆ.
ದೇಶದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲಿಯೇ ಅತ್ಯಂತ ಮಹತ್ವದ ಸಚಿವಾಲಯವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನನಗೆ ನೀಡಿರುವುದು ಸಂತಸ ತಂದಿದೆ. ಇದರಿಂದ ಪ್ರಧಾನಿ ಮೋದಿ ಅವರಿಗೆ ಯುವಕರ ಮೇಲೆ ನಂಬಿಕೆ ಇರುವುದು ಅರ್ಥವಾಗುತ್ತದೆ ಎಂದು ಹೇಳಿದರು.
ಉತ್ತಮ ನಾಯಕನಾಗುವುದು ಹೇಗೆ ಎಂಬುದನ್ನು ಚಂದ್ರಬಾಬು ನಾಯ್ಡು ಅವರಿಂದ ಕಲಿತಿದ್ದೇನೆ. ನೂರು ದಿನಗಳ ಯೋಜನೆ ಸಿದ್ಧಪಡಿಸಿ ಅನುಷ್ಠಾನಗೊಳಿಸಲಾಗುವುದು. ತಂತ್ರಜ್ಞಾನದ ಬಳಕೆಯಿಂದ ನಾಗರಿಕ ವಿಮಾನಯಾನವನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲಾಗುವುದು.ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ವೇಗ ನೀಡಲಾಗುವುದು ಎಂದು ತಿಳಿಸಿದರು. (ಏಜೆನ್ಸೀಸ್)