

ಲಂಡನ್: ಕರೊನಾ ಪಿಡುಗಿನ ಕುರಿತು ಔಷಧ-ಲಸಿಕೆ ಇನ್ನೂ ಕಂಡು ಹಿಡಿಯಲಾಗದ್ದು ಒಂದೆಡೆಯಾದರೆ, ಮತ್ತೊಂದೆಡೆ ಕರೊನಾ ವೈರಸ್ ಕೂಡ ಸ್ವಭಾವ ಬದಲಿಸಿ ಮತ್ತೆ ಮತ್ತೆ ಕಾಡುತ್ತಲೇ ಇದೆ. ಈ ಮಧ್ಯೆ ಸೋಂಕಿತರ ಚಿಕಿತ್ಸೆ ಕುರಿತು ಸ್ಪಷ್ಟ ನಿಲುವು ತಳೆಯುವಂಥ ಪರೀಕ್ಷೆಯೊಂದನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.
ಡಬ್ಲಿನ್ ಬಾಸ್ಟನ್ ಸ್ಕೋರ್ ಎಂದು ಕರೆಯಲಾಗುವ ಈ ರಕ್ತ ಪರೀಕ್ಷೆಯಿಂದ ಸೋಂಕಿತರ ಮುಂದಿನ ಸ್ಥಿತಿಯನ್ನು ಖಚಿತವಾಗಿ ತಿಳಿಯಬಹುದು ಎಂಬ ಅಧ್ಯಯನ ವರದಿ ಇ-ಬಯೋಮೆಡಿಸಿನ್ ಜರ್ನಲ್ನಲ್ಲಿ ಪ್ರಕಟಗೊಂಡಿದೆ.
ಸೋಂಕು ಪತ್ತೆಯಾದ ಮೊದಲ 4 ದಿನಗಳಲ್ಲಿ ನಡೆಸುವ ಈ ಪರೀಕ್ಷೆಯಿಂದ ಮುಂದಿನ ಏಳು ದಿನಗಳಲ್ಲಿ ಸೋಂಕಿತರ ಪರಿಸ್ಥಿತಿ ಹೇಗಿರಲಿದೆ, ಸೋಂಕಿತರ ಪೈಕಿ ಯಾರು ಗಂಭೀರ ಪರಿಸ್ಥಿತಿಗೆ ಒಳಗಾಗಲಿದ್ದಾರೆ, ಯಾರಿಗೆ ಬರೀ ಚಿಕಿತ್ಸೆ ಸಾಕು, ಯಾರಿಗೆ ಐಸಿಯು ಬೇಕು ಎಂಬುದನ್ನು ನಿಖರವಾಗಿ ತಿಳಿಯಬಹುದು. ಈ ಪರೀಕ್ಷೆಯನ್ನು ಆಸ್ಪತ್ರೆಗೆ ದಾಖಲಿಸಲಾದ ಎಲ್ಲ ಸೋಂಕಿತರಿಗೂ ಮಾಡಬಹುದು ಎಂಬುದಾಗಿ ಐರ್ಲೆಂಡ್ನ ಆರ್ಸಿಎಸ್ಐ ಯುನಿವರ್ಸಿಟಿಯ ಸ್ಟಡಿ ಆಥರ್ ಗೆರ್ರಿ ಮೆಕ್ ಎಲ್ವಾನೆ ಹೇಳಿದ್ದಾರೆ.
ಇಂಟರ್ಲ್ಯೂಕಿನ್ (ಐಎಲ್)-6 ಮತ್ತೊಂದು ಇಂಟರ್ಲ್ಯೂಕಿನ್(ಐಎಲ್) -10 ಎಂಬ ಎರಡು ಪರಮಾಣುಗಳ ಮಟ್ಟದ ಮೇಲೆ ಈ ಪರೀಕ್ಷೆ ನಡೆಯಲಿದೆ. ಗಂಭೀರ ಪರಿಸ್ಥಿತಿಯ ರೋಗಿಗಳಲ್ಲಿ ಈ ಎರಡರ ಮಟ್ಟದಲ್ಲೂ ತೀವ್ರ ವ್ಯತ್ಯಯವಾಗಿರುತ್ತದೆ. ಇವೆರಡರ ಅನುಪಾತದ ಮೇಲೆ ರೋಗಿಯ ಸಂಭಾವ್ಯ ಪರಿಸ್ಥಿತಿಯ ಮಾಹಿತಿ ಲಭಿಸುತ್ತದೆ. (ಏಜೆನ್ಸೀಸ್)