ಸೇವಾನಿಷ್ಠ ಡಾ.ಜಿ.ಮಾದೇಗೌಡ ಸ್ಪೆಷಾಲಿಟಿ ಆಸ್ಪತ್ರೆ; ಕೆ.ಎಂ. ದೊಡ್ಡಿಯಲ್ಲಿ ಆಧುನಿಕ ಚಿಕಿತ್ಸಾ ಸೌಲಭ್ಯ ಗ್ರಾಮೀಣ ಜನರ ‘ಆರೋಗ್ಯ ಮಿತ್ರ’

MND
Published on

ಕೆ.ಎಂ. ದೊಡ್ಡಿ (ಮಂಡ್ಯ):  ವರ್ಷದ ಹಿಂದೆ ಕೆ.ಎಂ. ದೊಡ್ಡಿಯಲ್ಲಿ ಆರಂಭವಾದ ‘ಡಾ. ಜಿ. ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ ಉತ್ತಮ ಸೇವಾ ಕೈಂಕರ್ಯದಿಂದ ರೋಗಿಗಳ ಪಾಲಿಗೆ ಧನ್ವಂತರಿಯಾಗಿದೆ.

ಗ್ರಾಮೀಣ ಬಡಜನರಿಗೆ ಉತ್ತಮ ಆರೋಗ್ಯಸೇವೆ ದುರ್ಲಭವಾಗಿರುವ ಈ ದಿನಗಳಲ್ಲಿ, ಎಲ್ಲ ಚಿಕಿತ್ಸೆಗಳನ್ನು ಕಡಿಮೆ ವೆಚ್ಚದಲ್ಲಿ ನೀಡಲು ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪಣ ತೊಟ್ಟಿದೆ. ದಿನದ 24 ಗಂಟೆಯೂ ಸೇವೆ ಒದಗಿಸುವ ಈ ಆಸ್ಪತ್ರೆ, ಈ ಭಾಗದವರ ಪಾಲಿಗೆ ‘ಆರೋಗ್ಯ ಮಿತ್ರ’ ಎನಿಸಿಕೊಂಡಿದೆ. ಈ ವ್ಯಾಪ್ತಿಯಲ್ಲಿ ಯಾವುದೇ ರಸ್ತೆ ಅಪಘಾತವಾದರೆ ಗಾಯಗೊಂಡವರನ್ನು ಮಂಡ್ಯದ ಜಿಲ್ಲಾಸ್ಪತ್ರೆ, ದೂರದ ಬೆಂಗಳೂರು, ಮೈಸೂರು ಆಸ್ಪತ್ರೆಗಳಿಗೆ ರವಾನಿಸಬೇಕಿತ್ತು. ಆ ವೇಳೆಗೆ ಎಷ್ಟೋ ಜನರ ಪ್ರಾಣಪಕ್ಷಿ ಹಾರಿಹೋಗುತ್ತಿತ್ತು. ಈಗ ಆ ಸಮಸ್ಯೆ ಇಲ್ಲ. ಡಾ. ಜಿ. ಮಾದೇಗೌಡ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಕಾರ್ಯತತ್ಪರತೆ ಇಲ್ಲಿನ ಜನರ ಮುಕ್ತ ಪ್ರಶಂಸೆಗೆ ಒಳಗಾಗಿದೆ.

ಹೈಟೆಕ್ ಸೌಲಭ್ಯಗಳು ಲಭ್ಯ: 40 ಕೋಟಿ ರೂ. ವೆಚ್ಚದಲ್ಲಿ ಭವ್ಯವಾಗಿ ನಿರ್ವಣವಾಗಿರುವ 200 ಒಳರೋಗಿ ದಾಖಲು ಸಾಮರ್ಥ್ಯದ ಆಸ್ಪತ್ರೆ ಯಲ್ಲಿ ಎಲ್ಲ ಬಗೆಯ ರೋಗಗಳಿಗೂ ಚಿಕಿತ್ಸಾ ವಿಭಾಗಗಳಿವೆ. ಹೃದ್ರೋಗ, ನೇತ್ರ, ನರ, ಮೂಳೆರೋಗ, ಸ್ತ್ರೀರೋಗ, ಕ್ಯಾನ್ಸರ್, ಮೂತ್ರಪಿಂಡ ವೈಫಲ್ಯ ಇನ್ನಿತರ ಕಾಯಿಲೆಗಳಿಗೆ ಕೈಗೆಟುಕುವ ವೆಚ್ಚದಲ್ಲಿ ಚಿಕಿತ್ಸೆ ಲಭ್ಯವಿದೆ. ಜಿಲ್ಲೆಯಲ್ಲಿ ಮಧುಮೇಹ ಹಾಗೂ ಹೃದ್ರೋಗಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿರುವುದರಿಂದ ಅವುಗಳಿಗಾಗಿ ವಿಶೇಷ ವಿಭಾಗ ತೆರೆಯಲಾಗಿದೆ.

ಮಂಡ್ಯ, ಚಾಮರಾಜನಗರ, ರಾಮನಗರ ಜಿಲ್ಲೆಗಳಿಂದ ಆಸ್ಪತ್ರೆಗೆ ರೋಗಿಗಳು ಚಿಕಿತ್ಸೆಗೆ ಧಾವಿಸುತ್ತಿದ್ದು, ನುರಿತ ತಜ್ಞರಿಂದ ಗುಣಮಟ್ಟದ ಚಿಕಿತ್ಸೆ ಲಭಿಸುತ್ತಿದೆ. ಪ್ರತಿಯೊಂದಕ್ಕೂ ನಗರದ ಆಸ್ಪತ್ರೆಗಳಿಗೆ ತೆರಳಲು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದ ಹಳ್ಳಿಗಾಡಿನ ಜನರಿಗೆ ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವರದಾನವಾಗಿದೆ.

ಆಯುಷ್ಮಾನ್ ಭಾರತ್ ಸೌಲಭ್ಯ

ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯಡಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್​ದಾರರಿಗೆ ಇಲ್ಲಿ ಚಿಕಿತ್ಸೆಗೆ ಅವಕಾಶವಿದೆ. ನಿಯಮಾನುಸಾರ ಸರ್ಕಾರಿ ಆಸ್ಪತ್ರೆಯಲ್ಲಿ ರೆಫರಲ್ ಪಡೆದಿದ್ದರೆ ಡಾ. ಜಿ. ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭಿಸುತ್ತದೆ.

ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಆಸ್ಪತ್ರೆ ಇಲ್ಲದೆ ಜನ ಬೆಂಗಳೂರು, ಮೈಸೂರಿಗೆ ತೆರಳಿ ದುಬಾರಿ ಹಣ ನೀಡಿ ಚಿಕಿತ್ಸೆ ಪಡೆಯಬೇಕಿತ್ತು. ಆ ಸಮಸ್ಯೆಯನ್ನು ಡಾ.ಜಿ. ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿವಾರಿಸಿದೆ. ಈ ಭಾಗದ ಜನರ ಆರೋಗ್ಯ ರಕ್ಷಣೆಗೆ ಆಸ್ಪತ್ರೆ ಮುಂದಾಗಿದೆ. ಆಯುಷ್ಮಾನ್ ಭಾರತ್ ಸೇವೆಗೆ ಒಳಪಟ್ಟಿರುವುದು ಆಸ್ಪತ್ರೆ ಸೇವಾತತ್ಪರತೆಗೆ ಸಾಕ್ಷಿಯಾಗಿದೆ. | ಮಧು ಜಿ. ಮಾದೇಗೌಡ ವಿಧಾನಪರಿಷತ್ ಮಾಜಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net