ಶಿವಮೊಗ್ಗ: ದೇಶದಲ್ಲಿ ಪ್ರಸ್ತುತ ರೈತರ ಉತ್ಪನ್ನಗಳಿಗೆ ಸಾಗಣೆ ವೆಚ್ಚವೇ ಹೊರೆಯಾಗುತ್ತಿದೆ. ಅದನ್ನು ತಗ್ಗಿಸುವ ನಿಟ್ಟಿನಲ್ಲಿ ರೈತರ ಉತ್ಪನ್ನಗಳನ್ನು ಹೊರ ರಾಜ್ಯಗಳಿಗೆ ಕೊಂಡೊಯ್ಯಲು ಆಗುವ ಸಾಗಣೆ ವೆಚ್ಚವನ್ನು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕೇಂದ್ರ ಸರ್ಕಾರವೇ ಭರಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದು ಕೇಂದ್ರ ಕೃಷಿ, ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದರು.
ನಗರದ ಪಿಇಎಸ್‌ನ ಪ್ರೇರಣಾ ಸಭಾಂಗಣದಲ್ಲಿ ಶನಿವಾರ ಅನ್ವೇಷಣಾ ಇನ್ನೋವೇಷನ್ ಆ್ಯಂಡ್ ಎಂಟರ್‌ಫ್ರೀನ್ಯೋರಲ್ ಫೋರಂನಿಂದ ‘ಮಲೆನಾಡು ಸ್ಟಾರ್ಟಪ್ ಸಮ್ಮೇಳನ-2025’ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗಬೇಕು. ಆಗ ಮಾತ್ರ ರೈತರು ಆರ್ಥಿಕವಾಗಿ ಸದೃಢರಾಗಲು ಸಾಧ್ಯ. ಅದು ಸಾಧ್ಯವಾಗಬೇಕಾದರೆ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ಸ್ಥಳೀಯವಾಗಿ ಮಾರುಕಟ್ಟೆ ಒದಗಿಸಬೇಕು. ಇಲ್ಲವಾದರೆ ಹೊರರಾಜ್ಯಗಳಿಗೆ ಉತ್ಪನ್ನ ಸಾಗಿಸುವುದು ಅನಿವಾರ್ಯವಾಗಲಿದೆ. ಸಾಗಣೆ ವೆಚ್ಚ ಹೆಚ್ಚಾಗುತ್ತಿರುವ ಕಾರಣ ರೈತರಿಗೆ ಹೊರೆಯಾಗುತ್ತಿದೆ ಎಂದರು.
ಉತ್ಪಾದನೆ ಹೆಚ್ಚಿಸುವ ಜತೆಗೆ ನವದೆಹಲಿ, ಚೆನ್ನೈ, ಕೋಲ್ಕತಕ್ಕೆ ಹೋಗಿ ಮಾರಾಟ ಮಾಡಬೇಕಾದ ಸವಾಲು ರೈತರಿಗೆ ಎದುರಾಗಿದೆ. ಈಗಿನ ವ್ಯವಸ್ಥೆಯಲ್ಲಿ ಸಾರಿಗೆ ವೆಚ್ಚವೇ ಅಧಿಕವಾಗುತ್ತಿದ್ದು ಆ ಹೊರೆ ತಪ್ಪಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರೈತಪರ ಯೋಜನೆ ಜಾರಿಗೊಳಿಸಲಾಗುತ್ತಿದೆ. ಅದರಲ್ಲಿ ವಿಶೇಷವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ.50-50ರ ವೆಚ್ಚ ಭರಿಸುವ ಮೂಲಕ ರೈತರ ಮೇಲಿನ ಹೊರೆ ತಗ್ಗಿಸುವ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಶಾಸಕರಾದ ಶಾರದಾ ಪೂರ್ಯನಾಯ್ಕ, ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿಗಳಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಪ್ರೊ. ಆರ್.ಸಿ.ಜಗದೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಅನ್ವೇಷಣಾದ ವ್ಯವಸ್ಥಾಪಕ ನಿರ್ದೇಶಕ ಸಿ.ಎಂ.ಪಾಟೀಲ್, ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಅನ್ವೇಷಣಾ ನಿರ್ದೇಶಕ ಬಿ.ಆರ್.ಸುಭಾಷ್, ಟ್ರಸ್ಟ್‌ನ ಮುಖ್ಯ ಆಡಳಿತ ಸಂಯೋಜನಾಧಿಕಾರಿ ಡಾ. ಆರ್.ನಾಗರಾಜ್ ಉಪಸ್ಥಿತರಿದ್ದರು.
100 ಕೋಟಿ ರೂ. ವಹಿವಾಟು ದಾಟಲಿ
ಶಿವಮೊಗ್ಗದಲ್ಲಿ 45 ಎಫ್‌ಪಿಒಗಳು 65 ಕೋಟಿ ರೂ. ವ್ಯವಹಾರ ನಡೆಸಿವೆ. 30 ಸಾವಿರ ಸದಸ್ಯರಿದ್ದು ರೈತರಿಗೆ ಇದರ ಲಾಭ ಆಗಬೇಕು. ಕಳೆದ ವರ್ಷ 60 ಕೋಟಿ ರೂ. ವಹಿವಾಟು ನಡೆಸಿದ್ದು ಈ ವರ್ಷ 100 ಕೋಟಿ ರೂ. ವಹಿವಾಟು ದಾಟಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು. ಸಂಕ್ರಾಂತಿ ಹಬ್ಬದಂತೆ ರೈತರ ಜೀವನದ ಬೆಳಕು ಹೆಚ್ಚಾಗಬೇಕು. ಹವಾಮಾನ ಆಧಾರಿತ ಬೆಳೆ ವಿಮೆ ಕೃಷಿ ವಲಯಕ್ಕೂ ವಿಸ್ತರಿಸಬೇಕು ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಿದರು.