ಸೋಷಿಯಲ್ ಮೀಡಿಯಾ ನಿಯಮ ಕಠಿಣ

Social media
Published on

ನವದೆಹಲಿ: ಟ್ವಿಟರ್, ಫೇಸ್​ಬುಕ್ ಮತ್ತಿತರ ಸೋಷಿಯಲ್ ಮೀಡಿಯಾ, ಒಟಿಟಿ ವೆಬ್ ಸೀರೀಸ್​ಗಳ ನಿಯಮ ಉಲ್ಲಂಘನೆ ಪ್ರಕರಣ ಹೆಚ್ಚಿಸುತ್ತಿರುವಾಗಲೇ ಅವುಗಳಿಗೆ ಅಂಕುಶ ಹಾಕುವುದಕ್ಕಾಗಿ ಕೇಂದ್ರ ಸರ್ಕಾರ ಗುರುವಾರ ನಿಯಮಗಳನ್ನು ಪ್ರಕಟಿಸಿದೆ.

ಫೇಸ್​ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಮಾಧ್ಯಮಗಳು ಮತ್ತು ನೆಟ್​ಫ್ಲಿಕ್ಸ್, ಅಮೆಜಾನ್ ಪ್ರೖೆಮ್ ಮುಂತಾದ ಓವರ್ ದ ಟಾಪ್ (ಒಟಿಟಿ) ಮೀಡಿಯಾಗಳು ಕಂಟೆಂಟ್ ವಿಚಾರದಲ್ಲಿ ಸ್ವಯಂ ನಿರ್ಬಂಧ ಹೇರಿಕೊಳ್ಳುವುದರ ಅವಶ್ಯಕತೆಯನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. ‘ಇನ್​ಫಾಮೇಷನ್ ಟೆಕ್ನಾಲಜಿ(ಇಂಟರ್​ವಿುೕಡಿಯರಿ ಗೈಡ್​ಲೈನ್ಸ್ ಆಂಡ್ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ರೂಲ್ಸ್ 2021’ ಇದಾಗಿದ್ದು, ಮೂರು ಸ್ತರದ ಸ್ವಯಂ ನಿಯಂತ್ರಣ ಮಾದರಿ ಇದರಲ್ಲಿದೆ. ಸೋಷಿಯಲ್ ಮೀಡಿಯಾದ ದುರ್ಬಳಕೆ ತಡೆಯುವುದು ಇದರ ಉದ್ದೇಶ ಎಂದು ಸಚಿವರು ವಿವರಿಸಿದರು.

ಸಾಮಾಜಿಕ ಮಾಧ್ಯಮ ನಿಯಮ

  • ನ್ಯೂಡಿಟಿ, ಲೈಂಗಿಕ ನಡವಳಿಕೆ ಅಥವಾ ಮಾರ್ಫ್ ಮಾಡಿದ ಚಿತ್ರ, ವಿಡಿಯೋಗಳಿರುವ ಕಂಟೆಂಟ್​ಗಳನ್ನು ಕಂಪನಿಗಳು ಆಕ್ಷೇಪ ವ್ಯಕ್ತವಾದ 24 ಗಂಟೆಯೊಳಗೆ ತೆಗೆದುಹಾಕಬೇಕು.
  • ಕುಂದುಕೊರತೆ ಅಧಿಕಾರಿಯನ್ನು ನೇಮಕ ಮಾಡಬೇಕು. ಕುಂದುಕೊರತೆಗಳನ್ನು ಅವರು ದೂರು/ಆಕ್ಷೇಪ ಸ್ವೀಕರಿಸಿದ 24 ಗಂಟೆಯೊಳಗೆ ಅಂಗೀಕರಿಸಿ ಪರಿಹರಿಸಬೇಕು. ಗರಿಷ್ಠ 15 ದಿನದ ಒಳಗೆ ಎಲ್ಲವೂ ಪರಿಹಾರವಾಗಿರಬೇಕು.
  • ಸರ್ಕಾರ ಅಥವಾ ಕೋರ್ಟ್​ನ ಆದೇಶ ಸಿಕ್ಕ ನಂತರದಲ್ಲಿ ನಿಷೇಧಿತ ಕಂಟೆಂಟ್ ಅಥವಾ ದೇಶದ ಮತ್ತು ಸಾರ್ವಜನಿಕ ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಅಂತಹ ಕಂಟೆಂಟ್​ಗಳನ್ನು ಪ್ರಕಟಿಸಬಾರದು ಅಥವಾ ಪ್ರಸಾರ ಮಾಡಬಾರದು.
  • ಸೋಷಿಯಲ್ ಮೀಡಿಯಾ ಇಂಟರ್​ನೆಟ್ ಮೀಡಿಯಗಳನ್ನು - ಸಾಮಾಜಿಕ ಮಾಧ್ಯಮ ಮಧ್ಯವರ್ತಿ ಮತ್ತು ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿ ಎಂಬ ಎರಡು ಕೆಟಗರಿಗಳಾಗಿ ವಿಂಗಡಿಸಲಾಗುತ್ತದೆ.
  • ಬಳಕೆದಾರರ ಸಂಖ್ಯೆಗೆ ಅನುಗುಣವಾಗಿ ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳನ್ನು ನಿರ್ಧರಿಸಲಾಗುತ್ತದೆ. ಅವುಗಳು ಯಾವವು ಎಂಬುದನ್ನು ಶೀಘ್ರವೇ ಘೋಷಿಸಲಾಗುತ್ತದೆ.
  • ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಹೆಚ್ಚುವರಿ ನಿಗಾ ವಹಿಸಬೇಕಾದ್ದು ಅಗತ್ಯ.
  • ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಚೀಫ್ ಕಂಪ್ಲಯನ್ಸ್ ಆಫೀಸರ್ ಮತ್ತು ನೋಡೆಲ್ ಸಂಪರ್ಕ ವ್ಯಕ್ತಿ, ಒಬ್ಬ ಸ್ಥಾನಿಕ ಕುಂದುಕೊರತೆ ಅಧಿಕಾರಿಯನ್ನು ನೇಮಕ ಮಾಡಬೇಕು. ಈ ಮೂವರು ಅಧಿಕಾರಿಗಳು ಭಾರತದಲ್ಲೇ ಇರಬೇಕು.
  • ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ತಿಂಗಳಿಗೊಮ್ಮೆ ಸ್ವೀಕೃತ ಅಹವಾಲುಗಳು, ತೆಗೆದುಕೊಂಡ ಕ್ರಮ ಮತ್ತು ತತ್​ಕ್ಷಣವೇ ತೆಗೆದುಹಾಕಿದ ಕಂಟೆಂಟ್​ಗಳ ವರದಿಯನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು.
  • ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗೆ ಭಾರತದಲ್ಲಿ ಕಚೇರಿ ಇರತಕ್ಕದ್ದು ಮತ್ತು ಅದರ ವಿವರವನ್ನು ತನ್ನ ವೆಬ್​ಸೈಟ್ ಅಥವಾ ಮೊಬೈಲ್ ಆಪ್ ಅಥವಾ ಎರಡರಲ್ಲೂ ಪ್ರಕಟಿಸಬೇಕು.
  • ದೇಶದ ಸಾರ್ವಭೌಮತೆ, ರಾಜ್ಯದ ಸುರಕ್ಷತೆ ಅಥವಾ ಸಾರ್ವಜನಿಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಂದೇಶ ರಚನೆಕಾರನ ಗುರುತು ವಿವರವನ್ನು ಮೆಸೇಜಿಂಗ್ ಫ್ಲಾಟ್​ಫಾರಂಗಳು ಪತ್ತೆಹಚ್ಚಿ ಇರಿಸುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು. ಆದರೆ, ಆ ಸಂದೇಶವನ್ನು ಬಹಿರಂಗಪಡಿಸಬೇಕಾದ ಅವಶ್ಯಕತೆ ಇಲ್ಲ.
  • ತಮ್ಮ ತಮ್ಮ ಖಾತೆಗಳನ್ನು ವೈರಿಫೈಡ್ ಖಾತೆಯನ್ನಾಗಿ ಪರಿವರ್ತಿ ಸುವುದಕ್ಕೆ ಬಯಸುವ ಬಳಕೆದಾರರಿಗೆ ಅದನ್ನು ಒದಗಿಸಬೇಕು.
  • ಸಾಮಾಜಿಕ ಮಾಧ್ಯಮಗಳು ತನ್ನಿಂತಾನೇ ಕಂಟೆಂಟ್ ತೆಗೆದು ಹಾಕುವುದಾದರೆ, ಆ ಬಗ್ಗೆ ಬಳಕೆದಾರರಿಗೆ ಮುಂಚಿತವಾಗಿ ಮಾಹಿತಿ ನೀಡಿ ಅಂತಹ ಕ್ರಮ ತೆಗೆದುಕೊಳ್ಳಬೇಕು. ಅಂತಹ ಕ್ರಮಗಳ ವಿರುದ್ಧ ಬಳಕೆದಾರರಿಗೂ ಆಕ್ಷೇಪ ಸಲ್ಲಿಸುವುದಕ್ಕೆ ಅವಕಾಶ ನೀಡಬೇಕು.
  • ಈ ನಿಯಮಗಳು ಗೆಜೆಟ್​ನಲ್ಲಿ ಅಧಿಕೃತವಾಗಿ ಪ್ರಕಟವಾದ ನಂತರ ಚಾಲ್ತಿಗೆ ಬರಲಿದೆ.
  • ಮಧ್ಯವರ್ತಿಗಳು ಈ ನಿಯಮಗಳನ್ನು ಪಾಲಿಸದೇ ಹೋದರೆ, ಸೇಫ್ ಹಾರ್ಬರ್ ಪ್ರಾವಿನ್ಸ್ ಅವರಿಗೆ ಅನ್ವಯವಾಗುವುದಿಲ್ಲ.

ಒಟಿಟಿ, ಡಿಜಿಟಲ್ ಮೀಡಿಯಾ ನಿಯಮ

1. ಒಟಿಟಿ ಫ್ಲಾಟ್​ಫಾರಂಗಳು ಮತ್ತು ಆನ್​ಲೈನ್ ನ್ಯೂಸ್, ಡಿಜಿಟಲ್ ಮೀಡಿಯಾ ಸಂಸ್ಥೆಗಳಿಗೆ ನೀತಿ ಸಂಹಿತೆ ಅನ್ವಯ

2. ಒಟಿಟಿ ಫ್ಲಾಟ್​ಫಾರಂಗಳು ಕಂಟೆಂಟ್​ಗಳನ್ನು ಸ್ವಯಂ ವಯೋಮಾನ ಆಧಾರಿತವಾಗಿ ಯು (ಯೂನಿವರ್ಸಲ್), ಯು/ಎ 7+,ಯು/ಎ 13+, ಯು/ಎ 16+ ಮತ್ತು ಎ (ಅಡಲ್ಟ್) ಎಂದು 5 ವರ್ಗೀಕರಣ ಮಾಡಬೇಕು.

3. 13 ವರ್ಷ ಮೇಲ್ಪಟ್ಟವರು ವೀಕ್ಷಿಸಬಹುದಾದ ಕಂಟೆಂಟ್​ಗಳಿಗೆ ಪೇರೆಂಟಲ್ ಲಾಕ್ ಒದಗಿಸಬೇಕು.

4. ಕಾರ್ಯಕ್ರಮದ ರೇಟಿಂಗ್ ನಮೂದಿಸುವುದು ಕಡ್ಡಾಯವಾಗಿದ್ದು, ಯಾರು ಅದನ್ನು ವೀಕ್ಷಿಸಬಹುದು ಎಂಬುದನ್ನು ನಿರ್ಧರಿಸುವುದಕ್ಕೆ ಅನುಕೂಲವಾಗುತ್ತದೆ.

5. ಸುದ್ದಿ ಪ್ರಕಟಿಸುವ ಡಿಜಿಟಲ್ ಮೀಡಿಯಾಗಳು ರೆಗ್ಯುಲೇಶನ್ ಆಕ್ಟ್ ನಿಯಮ ಪಾಲಿಸಬೇಕು.

6. ಮೂರು ಸ್ತರದ ಕುಂದುಕೊರತೆ ನಿವಾರಣಾ ವ್ಯವಸ್ಥೆ ಜಾರಿ - ಪಬ್ಲಿಷರ್​ಗಳ ಸ್ವಯಂ ನಿಯಂತ್ರಣ, ಸ್ವಯಂ ನಿಯಂತ್ರಣ ಸಂಸ್ಥೆಗಳ ಮೂಲಕ ಸ್ವಯಂ ನಿಯಂತ್ರಣ ಮತ್ತು ಓವರ್​ಸೈಟ್ ಮೆಕಾನಿಸಂ ಜಾರಿಯಲ್ಲಿ ಇರಲಿದೆ.

7. ಭಾರತದಲ್ಲೇ ಇರುವ ಕುಂದುಕೊರತೆ ಅಧಿಕಾರಿಯನ್ನು ಪಬ್ಲಿಷರ್​ಗಳು ನೇಮಕ ಮಾಡಿಕೊಳ್ಳಬೇಕು. ಅವರು 15 ದಿನದೊಳಗೆ ಕುಂದುಕೊರತೆ ಪರಿಹರಿಸಬೇಕು.

8. ಈ ಸಂಸ್ಥೆಗಳನ್ನು ವಾರ್ತಾ ಪ್ರಸಾರ ಸಚಿವಾಲಯದಲ್ಲಿ ನೋಂದಾಯಿಸಿಕೊಳ್ಳಬೇಕು.

10. ಓವರ್ ಸೈಟ್ ಮೆಕಾನಿಸಂನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ ರೂಪಿಸಲಿದೆ.

11. ಅಂತರ್ ಇಲಾಖೆ ಸಮಿತಿಯನ್ನೂ ಕುಂದು ಕೊರತೆ ದೂರು ವಿಚಾರಣೆಗೆ ನೇಮಕ ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net