ಸುಳ್ಳು ದಾಖಲೆ ಕೊಟ್ರೆ ಸೀಟು ರದ್ದು: ಆರ್​ಟಿಇನಲ್ಲಿ ಹೊಸ ನಿಯಮ, ಸರ್ಕಾರಕ್ಕೆ ಪತ್ರ ಮುಖೇನ ಕೋರಿಕೆ

RTE
Published on

ಬೆಂಗಳೂರು: ಆರ್​ಟಿಇ ಸೀಟು ಪಡೆಯಲು ನಕಲಿ ದಾಖಲೆ ಸಲ್ಲಿಸುವ ಪಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿರುವ ಶಿಕ್ಷಣ ಇಲಾಖೆ, ಇಂತಹ ಪ್ರಕರಣಗಳು ಬೆಳಕಿಗೆ ಬಂದಲ್ಲಿ ಸೀಟನ್ನೇ ರದ್ದುಗೊಳಿಸಲು ತೀರ್ವನಿಸಿದೆ. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದು ಕಾನೂನು ರಚನೆಗೂ ಮನವಿ ಮಾಡಿದೆ. 2012-13ನೇ ಸಾಲಿನಿಂದ ರಾಜ್ಯದಲ್ಲಿ ಆರ್​ಟಿಇ (ಶಿಕ್ಷಣ ಹಕ್ಕು ಕಾಯೆ) ಜಾರಿಗೆ ಬಂದಿದ್ದರೂ ಸುಳ್ಳು ದಾಖಲೆ ಸಲ್ಲಿಸಿದವರ ವಿರುದ್ಧ ಕ್ರಮ ಜರುಗಿಸಲು ಕಾಯ್ದೆಯಲ್ಲಿ ಅವಕಾಶವಿಲ್ಲ. ಹೀಗಾಗಿ ಹೊಸ ಕಾನೂನು ಜಾರಿಗೊಳಿಸಲು ನಿರ್ಧರಿಸಿರುವ ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಪತ್ರ ಬರೆದಿದೆ.

ಆರ್​ಟಿಇ ಅಡಿ ಕಳೆದ ವರ್ಷದಿಂದ ಸರ್ಕಾರಿ ಶಾಲೆಯಲ್ಲಿ ಮಾತ್ರ ಸೀಟು ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳು ಇಲ್ಲದ ಕಡೆ ಮಾತ್ರ ಖಾಸಗಿ ಶಾಲೆಗಳಿಗೆ ಸೀಟು ಹಂಚಿಕೆ ಮಾಡಲಾಗುತ್ತಿದೆ. ಆದರೂ ಸುಳ್ಳು ದಾಖಲೆ ಸಲ್ಲಿಸಿ ಖಾಸಗಿ ಶಾಲೆಗಳಲ್ಲಿ ಸೀಟು ಪಡೆಯುವ ಪ್ರಕರಣಗಳಿಗೆ ಮುಕ್ತಿ ಸಿಕ್ಕಿಲ್ಲ. ಅರ್ಜಿ ಸಲ್ಲಿಸಿದಾಗ ದಾಖಲೆಗಳ ನೈಜತೆ ಪರಿಶೀಲಿಸಿದರೂ ಸುಳ್ಳು ದಾಖಲೆ ಪತ್ತೆ ಹಚ್ಚುವುದು ಕಷ್ಟ. ಯಾರಾದರೂ ದೂರು ನೀಡಿದಾಗ ಮಾತ್ರವೇ ಬೆಳಕಿಗೆ ಬರುತ್ತದೆ. ಇಂಥದನ್ನು ಪತ್ತೆಹಚ್ಚಿದರೂ ಒಮ್ಮೆ ಸೀಟು ಪಡೆದ ಮೇಲೆ ಅದನ್ನು ರದ್ದುಮಾಡಲು ಕಾಯ್ದೆಯಲ್ಲಿ ಅವಕಾಶವಿಲ್ಲ.

6,47,878 ವಿದ್ಯಾರ್ಥಿಗಳಿಗೆ ಲಾಭ

ಶಿಕ್ಷಣ ಇಲಾಖೆ 2020-21ನೇ ಸಾಲಿಗೆ ಆರ್​ಟಿಇ ಅರ್ಜಿ ಆಹ್ವಾನಿಸಲು ಸಿದ್ಧತೆ ನಡೆಸುತ್ತಿದೆ. ಪ್ರತಿ ವರ್ಷದಂತೆ ಆನ್​ಲೈನ್​ನಲ್ಲೇ ಪ್ರಕ್ರಿಯೆ ನಡೆಸಲಿದೆ. 201213ರಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಅರ್​ಟಿಇ ಅನುಷ್ಠಾನ ಮಾಡಿದಾಗ 49,282 ಮಕ್ಕಳು ಪ್ರವೇಶ ಪಡೆದಿದ್ದರು. 2018-19ನೇ ಸಾಲಿನಲ್ಲಿ ಸಂಖ್ಯೆ1,20,041ಕ್ಕೆ ಏರಿಕೆಯಾಯಿತು. ಈವರೆಗೆ 6,47,878 ವಿದ್ಯಾರ್ಥಿಗಳು ಆರ್​ಟಿಇ ಅಡಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಖಾಸಗಿ ಶಾಲೆಗಳಿಗೆ ಸರ್ಕಾರ 1390.23 ಕೋಟಿ ರೂ. ಶುಲ್ಕ ಮರುಪಾವತಿ ಮಾಡಿದೆ.

ಸುಳ್ಳು ದಾಖಲೆ ಸೃಷ್ಟಿ ಹೇಗೆ?

ಆರ್​ಟಿಇನಲ್ಲಿ ಆಯಾ ವಾರ್ಡ್​ನಲ್ಲಿರುವ ಶಾಲೆಗಳಿಗೆ ಸೀಮಿತವಾಗಿ ಅರ್ಜಿ ಸಲ್ಲಿಸಲು ನಿಯಮ ರೂಪಿಸಲಾಗಿದೆ. ಕೆಲವು ವಾರ್ಡ್ ಗಳಲ್ಲಿ ಉತ್ತಮ ಶಾಲೆ ಇಲ್ಲದಿರುವುದರಿಂದ ಪಾಲಕರು ಬೇರೆ ವಾರ್ಡ್​ಗಳ ಶಾಲೆಗೆ ಅರ್ಜಿ ಸಲ್ಲಿಸಲು ಆ ವಾರ್ಡ್​ನಲ್ಲೇ ಬಾಡಿಗೆ ಮನೆ ಪಡೆದಿರುವುದಾಗಿ ಕರಾರುಪತ್ರ ಸಿದ್ಧಪಡಿಸುತ್ತಾರೆ. ಇದರ ಆಧಾರದ ಮೇಲೆ ಬ್ಯಾಂಕ್ ಪಾಸ್ ಪುಸ್ತಕದಲ್ಲಿ ವಿಳಾಸ ಬದಲು ಮಾಡಿಸಿ ಅರ್ಜಿ ಸಲ್ಲಿಸಿ ಸೀಟು ಪಡೆಯುತ್ತಾರೆ.

ಸುಳ್ಳು ದಾಖಲೆ ನೀಡಿ ಪ್ರವೇಶ ಪಡೆದ ಮೇಲೆ ಪಾಲಕರ ವಿರುದ್ಧ ಅಥವಾ ಮಕ್ಕಳ ಸೀಟು ರದ್ದು ಮಾಡಲು ಸದ್ಯ ಅವಕಾಶವಿಲ್ಲ. ಇದಕ್ಕೆ ಸೂಕ್ತ ನಿಯಮ ರೂಪಿಸುವಂತೆ ಕೋರಿದ್ದೇವೆ. | ಡಾ.ಕೆ.ಜಿ.ಜಗದೀಶ್ ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ

| ದೇವರಾಜ್ ಎಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net