ಬಿಬಿಎಂಪಿ ವ್ಯಾಪ್ತಿಯಲ್ಲಿ 300 ಕಿ.ಮೀ ಹೊಸ ರಸ್ತೆ: ಡಿಸಿಎಂ

ವಿಜಯವಾಣಿ (89)
Published on

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ 2795 ಗುಂಡಿ ಲೆಕ್ಕ ಸಿಕ್ಕಿದೆ. ಅವುಗಳನ್ನು ಹದಿನೈದು ದಿನದಲ್ಲಿ ಮುಚ್ಚಲು ಆದೇಶ ಹೊರಡಿಸಿದ್ದೇನೆ. ನಾನು ದೆಹಲಿಗೆ ಹೋಗಿದ್ದೆ, ಅಲ್ಲಿಗೆ ಹೋಲಿಸಿದರೆ ನಮ್ಮದೇ ಉತ್ತಮವಾಗಿದೆ. ಹಾಗೆಂದು ಅಲ್ಲಿನ ಬಗ್ಗೆ ಟೀಕೆ ಮಾಡಲ್ಲ. ಕೆಲವು‌ ಮುಖ್ಯ ರಸ್ತೆಗಳ ಬಗ್ಗೆ ಗಮನ‌ ಕಡಿಮೆಯಾಗಿತ್ತು. ಇದೀಗ 660 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ರಸ್ತೆ ಮಾಡಲು ಸೂಚಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

ನಂಬಿಕೆ ನಕ್ಷೆ

"ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಕಟ್ಟಲು, ಆಲ್ಟ್ರೇಷನ್ ಮಾಡಿಕೊಳ್ಳಲು ಇಂಜಿನಿಯರ್ ಅಥವಾ ಆರ್ಕಿಟೆಕ್ಟ್ ಮೂಲಕ ಪ್ಲಾನ್ ಸರ್ಟಿಫೈಯ್ಡ್ ತಾತ್ಕಾಲಿಕ ಮಂಜೂರಾತಿ ನಕ್ಷೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಎರಡು ವಲಯದಲ್ಲಿ ಪ್ರಾಯೋಗಿಕವಾಗಿ ಮಾಡಲಾಗಿತ್ತು, ಯಶಸ್ವಿಯಾಗಿದೆ. ಜನರು ಅಲೆದಾಟ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ" ಎಂದರು.

"ಡ್ರೈನೇಜ್ ಪಕ್ಕ‌ 50 ಮೀಟರ್​ವರೆಗೆ ಕಟ್ಟಡ ನಿರ್ಮಿಸಬಾರದೆಂದು ಕಾನೂನು ಇದೆ. ಹೀಗಾಗಿ ಚರಂಡಿ ಪಕ್ಕ ಖಾಲಿ ಇರುವ ಮುನ್ನೂರು ಕಿಮೀ‌ ಗುರುತಿಸಲಾಗಿದೆ.‌ ಅಲ್ಲಿ ಹೊಸ ರಸ್ತೆ ಮಾಡಲು ಉದ್ದೇಶಿಸಲಾಗಿದೆ. 30 ಅಡಿ ಹೊಸ ರಸ್ತೆ ಮಾಡಿ, ಖಾಸಗಿ ಜಾಗದ ಮಾಲಿಕರಿಗೆ ಟಿಡಿಆರ್ ಕೊಡಲಾಗುತ್ತದೆ. ಭೂಮಿಮೌಲ್ಯದ ಎರಡು ಪಟ್ಟು ಪರಿಹಾರ ಕೊಡಲಾಗುತ್ತದೆ. ಮೊದಲ ಹಂತದಲ್ಲಿ ನೂರು ಕಿ.ಮೀ ರಸ್ತೆ ಮಾಡಲಿದ್ದು, ಇನ್ನೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ರಸ್ತೆಯಲ್ಲಿ ಬಸ್ ಸಂಚಾರ ಅವಕಾಶ ಇಲ್ಲ, ಶಾಲಾ ಕಾಲೇಜು ಬಸ್ ಹೋಗಬಹುದು, ಕಾರು, ದ್ವಿಚಕ್ರ ವಾಹನ ಸಂಚರಿಸಬಹುದು. ಇದರಿಂದ ಭೂಮಿ ಮೌಲ್ಯವೂ ಹೆಚ್ಚಾಗಲಿದೆ" ಎಂದು ಹೇಳಿದರು.

ಸ್ವಚ್ಛತೆ ಕಾರ್ಯಕ್ರಮ

"ಅಕ್ಟೋಬರ್ ಎರಡರಂದು ಒಂದು ಸಾವಿರ ಶಾಲೆ- ಕಾಲೇಜುಗಳ ಮಕ್ಕಳಿಗೆ ಸ್ವಚ್ಛತೆಗೆ ಪ್ರತಿಜ್ಞೆ ಮಾಡಿಸಲಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವುದು ನಿಯಂತ್ರಿಸಲು, ಜವಾಬ್ದಾರಿ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ" ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net